ಮಿಲ್ವಾಕಿ: ತಮ್ಮ ಮೇಲಿನ ಗುಂಡಿನ ದಾಳಿ ’ಭಯಾನಕ’ ಅನುಭವ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅದೃಷ್ಠವೋ, ದೇವರ ಕೃಪೆಯೋ... ಪಾರಾದೆ ಎಂದು ಅವರು ನುಡಿದಿದ್ದಾರೆ.
ಗುಂಡಿನ ದಾಳಿ ಘಟನೆ ಬಳಿಕ ‘ನ್ಯೂಯಾರ್ಕ್ ಪೋಸ್ಟ್’ಗೆ ನೀಡಿದ ಮೊದಲ ಸಂದರ್ಶನದಲ್ಲಿ ಅವರು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
‘ನಾನು ಇಲ್ಲಿ ಇರುತ್ತಿರಲಿಲ್ಲ. ನಾನು ಸತ್ತು ಹೋಗಿರಬೇಕಿತ್ತು. ನಾನು ಸರಿಯಾದ ಸಮಯಕ್ಕೆ ಕತ್ತು ತಿರುಗಿಸಿದ್ದೆ. ಇಲ್ಲದಿದ್ದರೆ ಆ ಗುಂಡು ತಗುಲಿ ನಾನು ಸಾಯುತ್ತಿದ್ದೆ. ಅದೊಂದು ಭಯಾನಕ ಅನುಭವ’ ಎಂದು ಹೇಳಿದ್ದಾರೆ.
‘ಇಂತಹದ್ದನ್ನು ನಾನು ನೋಡಿಯೇ ಇಲ್ಲ. ಇದೊಂದು ಪವಾಡ’ ಎಂದು ಆಸ್ಪತ್ರೆಯ ವೈದ್ಯರು ಹೇಳಿದರು. ಅದೃಷ್ಠವೋ, ದೇವರ ಕೃಪೆಯೋ ಗೊತ್ತಿಲ್ಲ. ದೇವರ ದಯೆಯಿಂದ ನಾನು ಇಲ್ಲಿದ್ದೇನೆ ಎಂದು ಹಲವು ಮಂದಿ ಹೇಳಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ದಾಳಿ ಬಳಿಕ, ’ಫೈಟ್’ ಎಂದು ಕೈ ಮುಷ್ಠಿ ಮಾಡುವ ಚಿತ್ರದ ಬಗ್ಗೆಯೂ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ‘ನಾವು ನೋಡಿದ ಪ್ರಸಿದ್ಧ ಚಿತ್ರ ಅದು ಎಂದು ಹಲವರು ಹೇಳಿದ್ದಾರೆ. ಅವರು ಹೇಳಿದ್ದು ಸರಿ. ನಾನು ಸಾಯಲಿಲ್ಲ. ಪ್ರಸಿದ್ಧ ಚಿತ್ರ ಸಿಗಬೇಕಾದರೆ ಸಾಯಬೇಕು’ ಎಂದು ಹೇಳಿದ್ದಾರೆ.
‘ಗುಂಡಿನ ದಾಳಿ ನಡೆದ ಬಳಿಕವೂ ಭಾಷಣ ಮುಂದುವರಿಸಬೇಕು ಎಂದಿದ್ದೆ. ಆದರೆ, ಆಸ್ಪತ್ರೆಗೆ ತೆರಳಬೇಕು ಎಂದು ಆಂತರಿಕ ಭದ್ರತಾ ಸಿಬ್ಬಂದಿ ಸೂಚಿಸಿದರು’ ಎಂದು ಟ್ರಂಪ್ ನುಡಿದಿದ್ದಾರೆ.
ಘಟನೆ ನಡೆದ ಬಳಿಕ ಅಧ್ಯಕ್ಷ ಜೋ ಬೈಡನ್ ಅವರು ತೆಗೆದುಕೊಂಡ ಕ್ರಮಗಳ ಬಗ್ಗೆ ಟ್ರಂಪ್ ಶ್ಲಾಘಿಸಿದರು.
ಮಿಲ್ವಾಕಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗಿಯಾಗಲು ತೆರಳುವ ವೇಳೆ ‘ನ್ಯೂಯಾರ್ಕ್ ಪೋಸ್ಟ್’ನೊಂದಿಗೆ ಟ್ರಂಪ್ ಮಾತನಾಡಿದ್ದಾರೆ. ಬಲಗಿವಿಗೆ ಬಣ್ಣದ ಬ್ಯಾಂಡೇಜ್ ಸುತ್ತಿಕೊಂಡಿದ್ದು, ಅವರ ಸಿಬ್ಬಂದಿ ಫೋಟೊ ತೆಗೆಯಲು ಅನುಮತಿಸಿಲ್ಲ ಎಂದು ಪತ್ರಿಕೆ ಹೇಳಿದೆ.
ಪೆನ್ಸೆಲ್ವೇನಿಯಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. 20 ವರ್ಷದ ವ್ಯಕ್ತಿ ಹಾರಿಸಿದ ಗುಂಡು ಅವರ ಬಲಗಿವಿಗೆ ತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.