ADVERTISEMENT

ಕಾದಂಬರಿಕಾರ ವಿಲ್‌ಬರ್‌ ಸ್ಮಿತ್‌ ನಿಧನ

ಏಜೆನ್ಸೀಸ್
Published 14 ನವೆಂಬರ್ 2021, 12:30 IST
Last Updated 14 ನವೆಂಬರ್ 2021, 12:30 IST
ವಿಲ್‌ಬರ್‌ ಸ್ಮಿತ್
ವಿಲ್‌ಬರ್‌ ಸ್ಮಿತ್   

ಜೋಹಾನ್ಸ್‌ಬರ್ಗ್: ಸಾಹಸ ಕಥಾವಸ್ತುಗಳನ್ನು ಹೊಂದಿದ ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದ ಜಾಂಬಿಯಾ ಮೂಲದ ಲೇಖಕ ವಿಲ್‌ಬರ್ ಸ್ಮಿತ್‌ (88) ಕೇಪ್‌ಟೌನ್‌ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರು ಹಲವು ದಶಕಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

‘ತಮ್ಮ ನಿವಾಸದಲ್ಲಿ ಪತ್ನಿ ನಿಸೊ ಅವರೊಂದಿಗೆ ಸ್ಮಿತ್‌ ಅವರು ಬೆಳಿಗ್ಗೆ ಅಧ್ಯಯನ ಹಾಗೂ ಬರವಣಿಗೆಯಲ್ಲಿ ತೊಡಗಿದ್ದರು. ಈ ವೇಳೆ ಅವರು ಹಠಾತ್ತಾಗಿ ಸಾವನ್ನಪ್ಪಿದರು’ ಎಂದು ‘ವಿಲ್‌ಬರ್‌ ಸ್ಮಿತ್‌ ಬುಕ್ಸ್‌’ ವೆಬ್‌ಸೈಟ್‌ನಲ್ಲಿ ಶನಿವಾರ ಪ್ರಕಟಿಸಲಾಗಿದೆ. ಅವರ ಕೃತಿಗಳನ್ನು ಮುದ್ರಿಸುವ ಬ್ರಿಟನ್‌ನ ಬಾನಿಯರ್ ಬುಕ್ಸ್ ಸಂಸ್ಥೆ ಸಹ ಸ್ಮಿತ್‌ ನಿಧನ ಕುರಿತು ಮಾಹಿತಿ ನೀಡಿದೆ.

1964ರಲ್ಲಿ ‘ವೆನ್‌ ದಿ ಲಯನ್ ಫೀಡ್ಸ್‌’ ಎಂಬ ಕೃತಿ ಮೂಲಕ ಅವರು ಕಾದಂಬರಿ ರಚನೆ ಆರಂಭಿಸಿದರು. ಒಟ್ಟು 49 ಕೃತಿಗಳನ್ನು ರಚಿಸಿರುವ ಅವರು ಜಾಗತಿಕ ಮಟ್ಟದಲ್ಲಿ ಅಪಾರ ಓದುಗರನ್ನು ಹೊಂದಿರುವ ಕಾದಂಬರಿಕಾರರಾಗಿ ಗುರುತಿಸಿಕೊಂಡಿದ್ದರು. ಅವರ ಕೃತಿಗಳು ವಿಶ್ವದ 30ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿವೆ.

ADVERTISEMENT

‘ಕರ್ಟ್ನಿ ಸಿರೀಜ್’ ಹೆಚ್ಚು ಮಾರಾಟವಾದ ಕೃತಿ. ‘ಈಜಿಪ್ಷಿಯನ್ ಸಿರೀಜ್‌’ ಅವರ ಮತ್ತೊಂದು ಜನಪ್ರಿಯ ಕಾದಂಬರಿಯಾದರೆ, ‘ರಿವರ್‌ ಗಾಡ್‌’ ಈಗಲೂ ಅವರ ಅತ್ಯುತ್ತಮ ಕೃತಿ ಎಂದೇ ಪ್ರಸಿದ್ಧಿ.

ಕಾಡು ಸುತ್ತುವುದು, ಪರ್ವತಾರೋಹಣದಲ್ಲಿ ಆಸಕ್ತಿ ಹೊಂದಿದ್ದ ಅವರು ಪೈಲಟ್‌ ಪರವಾನಗಿಯನ್ನೂ ಹೊಂದಿದ್ದರು. ಸ್ಕೂಬಾ ಡೈವಿಂಗ್‌ನಲ್ಲೂ ಅವರು ಆಸಕ್ತಿ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.