ಬೆರೂಟ್: ‘ಯುದ್ಧಪೀಡಿತ ರಾಷ್ಟ್ರ’ ಎಂಬ ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಬಿಬಿಸಿ ವಿರುದ್ಧ ಹರಿಹಾಯ್ದಿರುವ ಸಿರಿಯಾ ಸರ್ಕಾರ, ಮಾಧ್ಯಮ ಸಂಸ್ಥೆಯ ಮಾನ್ಯತೆಯನ್ನು ರದ್ದು ಮಾಡಿದೆ. ಸುಳ್ಳು ಸುದ್ದಿ ಹಾಗೂ ಪಕ್ಷಪಾತ ಮಾಡುತ್ತಿದೆ ಎಂದು ಬಿಬಿಸಿ ವಿರುದ್ಧ ಆರೋಪ ಮಾಡಿದೆ.
ಸಿರಿಯಾದಲ್ಲಿನ ಮಾದಕವಸ್ತು ಕಳ್ಳಸಾಗಣೆ ವಿಷಯ ಕುರಿತ ವರದಿಯನ್ನು ಬಿಬಿಸಿ ಅರೆಬಿಕ್ ಪ್ರಸಾರ ಮಾಡಿದ ಮರುದಿನವೇ ಈ ಆದೇಶ ಹೊರಬಿದ್ದಿದೆ. ಬಹುಕೋಟಿ ಉದ್ಯಮವಾಗಿರುವ ಮಾದಕ ವಸ್ತು ಕಳ್ಳ ಸಾಗಣೆಯಲ್ಲಿ ಸಿರಿಯಾ ಸೇನೆ ಹಾಗೂ ಅಧ್ಯಕ್ಷ ಬಶಾರ್ ಅಸ್ಸಾದ್ ಕುಟುಂಬವೂ ಸೇರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಸಿರಿಯಾದ ಮಾಹಿತಿ ಮಂತ್ರಾಲಯದ ಸಚಿವ, ‘ಭಯೋತ್ಪಾದಕರ ಹೇಳಿಕೆ ಹಾಗೂ ಅವರು ನೀಡಿದ ಸಾಕ್ಷ್ಯಗಳನ್ನು ಆಧರಿಸಿ ತಪ್ಪು ಸಂದೇಶ ಹೋಗುವ ರೀತಿಯಲ್ಲಿ ಬಿಬಿಸಿ ಸುದ್ದಿ ಪ್ರಸಾರ ಮಾಡಿದೆ ಎಂದು ಆರೋಪಿಸಿದ್ದಾರೆ. ಇದರ ಭಾಗವಾಗಿ ಬಿಬಿಸಿ ವರದಿಗಾರ ಹಾಗೂ ಛಾಯಾಗ್ರಾಹಕರ ಮಾನ್ಯತೆಯನ್ನು ಸಿರಿಯಾ ರದ್ದು ಮಾಡಿದೆ.
ಸಿರಿಯಾದ ಕ್ರಮ ಕುರಿತು ಪ್ರತಿಕ್ರಿಯಿಸಿರುವ ಬಿಬಿಸಿ ಅರೆಬಿಕ್, ‘ನೈಜತೆಯನ್ನು ತಿಳಿಸಲು ನಾವು ರಾಜಕೀಯ ಕ್ಷೇತ್ರದ ಎಲ್ಲಾ ಆಯಾಮಗಳಲ್ಲಿ ವರದಿ ಮಾಡಿದ್ದೇವೆ. ಜತೆಗೆ ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದೇವೆ. ಸ್ವತಂತ್ರ ಹಾಗೂ ಪಕ್ಷಪಾತವಿಲ್ಲದ ಪತ್ರಿಕೋದ್ಯಮ ನಮ್ಮ ಧ್ಯೇಯ. ಅರೆಬಿಕ್ ಮಾತನಾಡುವ ಪ್ರದೇಶಗಳಲ್ಲಿ ಪಕ್ಷಪಾತ ರಹಿತ ಸುದ್ದಿ ಹಾಗೂ ಮಾಹಿತಿಯನ್ನು ನೀಡುವುದನ್ನು ನಾವು ಮುಂದುವರಿಸುತ್ತೇವೆ’ ಎಂದಿದೆ.
ಕ್ಯಾಪ್ಟಗಾನ್ ಆಂಫೆಟಮೈನ್ ಎಂಬ ಮಾದಕ ದ್ರವ್ಯದ ಕಳ್ಳಸಾಗಾಣಿಕೆ ಉದ್ಯಮವು ಯುದ್ಧ ಪೀಡಿತ ಸಿರಿಯಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗಿದೆ. ಪರಿಣಿತರು ಹೇಳುವಂತೆ ಈ ಉದ್ಯಮ ದೇಶದ ದುರ್ಬಲ ಆರ್ಥಿಕತೆ ಹಾಗೂ ಅನುಮೋದಿತ ನಾಯಕತ್ವಕ್ಕೆ ಬಲ ನೀಡುತ್ತಿದೆ. ಇದು ಸಿರಿಯಾ ಮಾತ್ರವಲ್ಲದೆ ಪಕ್ಕದ ಜೋರ್ಡಾನ್ ಹಾಗೂ ಸೌದಿ ಅರೆಬಿಯಾದಂತ ಕೊಲ್ಲಿ ರಾಷ್ಟ್ರಗಳಿಗೂ ವಿಸ್ತರಿಸಿದೆ.
ಕ್ಯಾಪ್ಟಗಾನ್ ಎಂಬ ರಾಸಾಯನಿಕವನ್ನು ದೈಹಿಕ ಶ್ರಮ ಬೇಡುವ ಕೆಲಸಗಳಲ್ಲಿ ನಿರತರಾಗಿರುವವರಲ್ಲಿ ಬಳಕೆ ಮಾಡಲಾಗುತ್ತಿದೆ. ಅದರಲ್ಲೂ ಯುದ್ಧ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಸೈನಿಕರು ಇದನ್ನು ಸೇವಿಸುತ್ತಾರೆ. ಈ ವಹಿವಾಟಿನಲ್ಲಿ ತೊಡಗಿರುವ ಅಸಾದ್ ಹಾಗೂ ಆತನ ಸಹಚರರಿಗೆ ತಮ್ಮ ರಾಷ್ಟ್ರಗಳ ಕೆಲ ಕಿಂಗ್‌ಪಿನ್‌ಗಳು ಕೈಜೋಡಿಸಿದ್ದಾರೆ ಎಂದು ಐರೋಪ್ಯ ರಾಷ್ಟ್ರಗಳು ಹಾಗೂ ಅಮೆರಿಕ ಹೇಳಿದೆ.
ಆದರೆ ಈ ಆರೋಪವನ್ನು ಅಲ್ಲಗಳೆದಿರುವ ಸಿರಿಯಾ, ‘ತಾನು ಕ್ಯಾಪ್ಟಗಾನ್ ಉತ್ಪಾದನೆ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಇದೇ ವಿಷಯವಾಗಿ ಸಿರಿಯಾದ ಸಂಸದರೊಬ್ಬರು ಇತ್ತೀಚೆಗೆ ಹೇಳಿಕೆ ನೀಡಿ, ‘ಕ್ಯಾಪ್ಟಗಾನ್ ರಾಸಾಯನಿಕಕ್ಕೆ ಸಿರಿಯಾವನ್ನು ಬಳಸಿಕೊಳ್ಳಲಾಗುತ್ತಿದೆ. ವಾಸ್ತವದಲ್ಲಿ ಆರೋಪ ಮಾಡುತ್ತಿರುವ ವಿರೋಧಪಕ್ಷದ ಗುಂಪೇ ಇದರ ಉತ್ಪಾದನೆಯಲ್ಲಿ ತೊಡಗಿದೆ’ ಎಂದು ಆರೋಪಿಸಿದ್ದರು.
ಸಿರಿಯಾದಲ್ಲಿ ಕಳೆದ 13 ವರ್ಷಗಳಿಂದ ನಾಗರಿಕ ಯುದ್ಧ ನಡೆಯುತ್ತಿದೆ. ಈವರೆಗೂ ಸುಮಾರು ಐದು ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಅಷ್ಟೇ ಪ್ರಮಾಣದ ಜನರು ಮನೆ ಕಳೆದುಕೊಂಡಿದ್ದಾರೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ಗುಂಪಿನ ಪ್ರತ್ಯೇಕ ಭೂಪ್ರದೇಶ ಹಾಗೂ ವಿರೋಧಪಕ್ಷದ ಪ್ರತ್ಯೇಕ ಭೂಪ್ರದೇಶಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.