ಡಮಾಸ್ಕಸ್/ಟೆಲ್ ಅವೀವ್ (ಎಪಿ/ಎಎಫ್‌ಪಿ/ರಾಯಿಟರ್ಸ್): ಇಸ್ರೇಲ್–ಹಮಾಸ್ ನಡುವಣ ಯುದ್ಧವು ಉತ್ತರದ ಸಿರಿಯಾ ಕಡೆಗೂ ವಿಸ್ತರಿಸಿದೆ. ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸಿರಿಯಾದ ಉತ್ತರ ಭಾಗದಲ್ಲಿರುವ ಅಲೆಪ್ಪೊ ನಗರದ ವಿಮಾನ ನಿಲ್ದಾಣದ ಮೇಳೆ ಇಸ್ರೇಲ್ ಗುರುವಾರ ವಾಯುದಾಳಿ ನಡೆಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಈ ದಾಳಿಯ ಪರಿಣಾಮವಾಗಿ ಈ ಎರಡೂ ವಿಮಾನ ನಿಲ್ದಾಣಗಳ ರನ್‌ವೇ ಹಾಳಾಗಿದೆ, ಅಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ವರದಿಗಳು ಹೇಳಿವೆ.
ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸೇನೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಿರಿಯಾದ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಸನಾ ವರದಿ ಮಾಡಿದೆ. ದಾಳಿಯ ಕುರಿತು ಪ್ರತಿಕ್ರಿಯೆ ನೀಡಲು ಇಸ್ರೇಲ್ ಸೇನೆ ನಿರಾಕರಿಸಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ ನಂತರದಲ್ಲಿ ಇಸ್ರೇಲ್, ಸಿರಿಯಾ ಮೇಲೆ ದಾಳಿ ನಡೆಸಿರುವುದು ಇದೇ ಮೊದಲು.
ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಲು ಇರಾನ್‌ನ ವಿದೇಶಾಂಗ ಸಚಿವರು ಶುಕ್ರವಾರ ಸಿರಿಯಾಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೆ ಒಂದು ದಿನ ಮೊದಲು ಈ ವಾಯುದಾಳಿ ನಡೆದಿದೆ. ಇರಾನ್‌ನ ಬೆಂಬಲ ಇರುವ ಬಂಡುಕೋರ ಗುಂಪುಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಆಗದಂತೆ ನೋಡಿಕೊಳ್ಳಲು ಇಸ್ರೇಲ್, ಸಿರಿಯಾ ದೇಶದ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳನ್ನು ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.
‘ಇಸ್ರೇಲ್ ಒಂಟಿಯಲ್ಲ’: ಅಮೆರಿಕವು ಯಾವತ್ತಿಗೂ ಇಸ್ರೇಲ್ ಜೊತೆ ಇರಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಗುರುವಾರ ಹೇಳಿದ್ದಾರೆ. ಪ್ಯಾಲೆಸ್ಟೀನ್ ಜನರು ನ್ಯಾಯಸಮ್ಮತವಾದ ಆಸೆಗಳನ್ನು ಹೊಂದಿದ್ದಾರೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.
ಹಮಾಸ್‌ನ ದಾಳಿಗೆ ತುತ್ತಾಗಿರುವ ಇಸ್ರೇಲ್‌ಗೆ ಬೆಂಬಲ ಸೂಚಿಸಲು ಬ್ಲಿಂಕನ್ ಅವರು ಇಲ್ಲಿಗೆ ಬಂದಿದ್ದಾರೆ. ‘ನೀವು (ಇಸ್ರೇಲಿನ ಜನ) ನಿಮ್ಮನ್ನು ಏಕಾಂಗಿಯಾಗಿ ರಕ್ಷಿಸಿಕೊಳ್ಳಲು ಸಮರ್ಥರಿರಬಹುದು. ಆದರೆ ಅಮೆರಿಕ ಇರುವವರೆಗೆ ನೀವು ಒಬ್ಬಂಟಿಯಲ್ಲ. ನಾವು ಯಾವತ್ತಿಗೂ ನಿಮ್ಮ ಜೊತೆ ಇರುತ್ತೇವೆ’ ಎಂದು ಬ್ಲಿಂಕನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್ ಜೊತೆ ದೃಢವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಹಮಾಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಸಂಯಮ ಪ್ರದರ್ಶಿಸಬೇಕು ಎಂದು ಹೇಳಿಲ್ಲ. ಆದರೆ ಬ್ಲಿಂಕನ್ ಅವರು ಶಾಂತಿ ಒಪ್ಪಂದವೊಂದು ಅಗತ್ಯ ಎಂಬ ಸೂಚನೆಯನ್ನು ನೀಡಿದ್ದಾರೆ.
‘ಶಾಂತಿ ಮತ್ತು ನ್ಯಾಯವನ್ನು ಬಯಸುವ ಯಾವುದೇ ವ್ಯಕ್ತಿ ಹಮಾಸ್‌ನ ಭಯೋತ್ಪಾದನೆಯನ್ನು ಖಂಡಿಸಬೇಕು. ಹಮಾಸ್ ಸಂಘಟನೆಯು ಪ್ಯಾಲೆಸ್ಟೀನ್ ಜನರನ್ನು ಪ್ರತಿನಿಧಿಸುವುದಿಲ್ಲ. ಘನತೆಯಿಂದ ಬದುಕುವ ಅವರ ನ್ಯಾಯಬದ್ಧ ಬಯಕೆಯನ್ನೂ ಪ್ರತಿನಿಧಿಸುವುದಿಲ್ಲ’ ಎಂದು ಬ್ಲಿಂಕನ್ ಹೇಳಿದ್ದಾರೆ.
ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಬದಿಗಿರಿಸಿ ಮಾತನಾಡಿದ ಬ್ಲಿಂಕನ್, ‘ನಾನು ಇಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಮಾತ್ರ ಬಂದಿಲ್ಲ. ಇಲ್ಲಿಗೆ ನಾನು ಒಬ್ಬ ಯಹೂದಿಯಾಗಿಯೂ ಬಂದಿದ್ದೇನೆ...’ ಎಂದರು. ಬ್ಲಿಂಕನ್ ಜೊತೆಯಲ್ಲೇ ನಿಂತು ಮಾತನಾಡಿದ ನೆತನ್ಯಾಹು, ‘ಐಎಸ್‌ಐಎಸ್ ಸಂಘಟನೆಯನ್ನು ಹೊಸಕಿಹಾಕಿದ ಮಾದರಿಯಲ್ಲೇ ಹಮಾಸ್ ಸಂಘಟನೆಯನ್ನೂ ಹೊಸಕಿಹಾಕಲಾಗುವುದು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.