ಕಾಬೂಲ್: ಅಫ್ಗಾನಿಸ್ತಾನದಲ್ಲಿ ಈ ವಾರದಲ್ಲಿ ಎಲ್ಲಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಾಲೆಗಳನ್ನು ತೆರೆಯಲಾಗುವುದು ಎಂದು ತಾಲಿಬಾನ್ ನೇತೃತ್ವದ ಶಿಕ್ಷಣ ಸಚಿವಾಲಯ ಸೋಮವಾರ ಘೋಷಿಸಿದೆ.
ಈ ಮೂಲಕ ಇಲ್ಲಿಯ ಬಾಲಕಿಯರಿಗೆ ಶಾಲೆಗಳಿಗೆ ಮತ್ತೆ ಪ್ರವೇಶ ನೀಡುವ ಸುಳಿವು ದೊರೆತಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನ ತಾಲಿಬಾನ್ ವಶವಾದ ನಂತರ ಹೆಣ್ಣು ಮಕ್ಕಳಿಗೆ 6ನೇ ತರಗತಿಗಿಂತ ಹೆಚ್ಚಿನ ಶಿಕ್ಷಣವನ್ನು ನಿರಾಕರಿಸಲಾಗಿತ್ತು.
ಬಾಲಕಿಯರು ಮತ್ತೆ ಶಾಲೆಗೆ ಪ್ರವೇಶಿಸಲು ಅನುಮತಿ ನೀಡುವಂತೆ ಅಂತರರಾಷ್ಟ್ರೀಯ ಸಮುದಾಯ ತಾಲಿಬಾನ್ ಆಡಳಿತವನ್ನು ಒತ್ತಾಯಿಸುತ್ತಿದೆ. ಈ ವರ್ಷದ ಆರಂಭದಲ್ಲಿ ತಾಲಿಬಾನ್ ಹೊಸ ಆಡಳಿತವು ವಿಶ್ವವಿದ್ಯಾಲಯಗಳಿಗೆ ಮಹಿಳೆಯರ ಪ್ರವೇಶವನ್ನು ಮುಕ್ತಗೊಳಿಸಿತ್ತು. ಆದರೆ ಲಿಂಗದ ಆಧಾರದಲ್ಲಿ ತರಗತಿಗಳನ್ನು ಪ್ರತ್ಯೇಕಗೊಳಿಸಿತ್ತು.
ಆಫ್ಗನ್ ಹೊಸ ವರ್ಷಾಚರಣೆ ನಂತರ ಎಲ್ಲಾ ಶ್ರೇಣಿಗಳ ತರಗತಿಗಳಿಗೆ ಮರಳಲು ಹೆಣ್ಣು ಮಕ್ಕಳಿಗೆ ಅವಕಾಶ ನೀಡುವುದಾಗಿ ತಾಲಿಬಾನ್ ಆಡಳಿತ ಭರವಸೆ ನೀಡಿತ್ತು. ಅಂತೆಯೇ ಸೋಮವಾರ ಹೊಸ ವರ್ಷಾಚರಣೆ ನಂತರ ಈ ಘೋಷಣೆ ಮಾಡಿದೆ.
‘ಬುಧವಾರದಿಂದ ತರಗತಿಗಳು ಆರಂಭವಾಗಲಿವೆ. ಶಿಕ್ಷಣ ಸಚಿವಾಲಯವು ತನ್ನ ಎಲ್ಲಾ ನಾಗರಿಕರ ಶಿಕ್ಷಣ ಹಕ್ಕಿಗೆ ಬದ್ಧವಾಗಿದೆ ಎಂದು ದೇಶಕ್ಕೆ ಭರವಸೆ ನೀಡುತ್ತದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಆದರೆ ಶಿಕ್ಷಣ ಸಚಿವಾಲಯವು ನಿರ್ದಿಷ್ಟವಾಗಿ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.