ಕುಂಡುಜ್ : ಅಫ್ಘಾನಿಸ್ತಾನದ ಬಹುತೇಕ ಪ್ರಾಂತ್ಯಗಳನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್, ಜನರ ಮೇಲೆ ತಮ್ಮದೇ ಪ್ರತ್ಯೇಕ ಕಾನೂನನ್ನು ಹೇರಲಾರಂಭಿದೆ.
‘ಮಹಿಳೆಯರು ಒಂಟಿಯಾಗಿ ಹೊರಗೆ ಓಡಾಡಬಾರದು. ಹೊರಗೆ ಹೋಗಬೇಕಿದ್ದರೆ ಪುರುಷ ಸಹಾಯಕನೊಬ್ಬ ಮಹಿಳೆಯರ ಜೊತೆಗೆ ಕಡ್ಡಾಯವಾಗಿ ಇರಬೇಕು. ಪುರುಷರು ಗಡ್ಡ ತೆಗೆಯುವಂತಿಲ್ಲ,’ ಎಂಬ ನಿಯಮಗಳನ್ನು ತಾಲಿಬಾನಿಗಳು ಜನರ ಮೇಲೆ ವಿಧಿಸಿದ್ದಾರೆ ಎಂದು ಕಲಾಫ್‌ಗಾನ್ ಜಿಲ್ಲೆಯ ನಿವಾಸಿ ಸೆಫತುಲ್ಲಾ (25) ಎಂಬುವವರು ಹೇಳಿದ್ದಾರೆ.
ಈ ಮಧ್ಯೆ, ತಾಲಿಬಾನಿಗಳು ಹೊರಡಿಸಿರುವುದು ಎನ್ನಲಾದ ಆದೇಶ ಪತ್ರವೊಂದು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಗ್ರಾಮಸ್ಥರು ತಮ್ಮ ಹೆಣ್ಣುಮಕ್ಕಳು ಮತ್ತು ವಿಧವಾ ಸ್ತ್ರೀಯರನ್ನು ತಾಲಿಬಾನಿ ಚಳವಳಿಯ ಸೈನಿಕರಿಗೆ ಕೊಟ್ಟು ಮದುವೆ ಮಾಡಬೇಕು,‘ ಎಂದು ಅದರಲ್ಲಿ ಆದೇಶಿಸಲಾಗಿದೆ.
‘ತಾಲಿಬಾನ್ ಹೋರಾಟಗಾರರನ್ನು ಮದುವೆಯಾಗಲು 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು 45 ವರ್ಷದೊಳಗಿನ ವಿಧವೆಯರ ಪಟ್ಟಿಯನ್ನು ಒದಗಿಸಬೇಕು. ತಾಲಿಬಾನ್ ವಶದಲ್ಲಿರುವ ಪ್ರದೇಶಗಳಲ್ಲಿನ ಎಲ್ಲಾ ಇಮಾಮ್‌ಗಳು ಮತ್ತು ಮುಲ್ಲಾಗಳು ಈ ಕೆಲಸ ಮಾಡಬೇಕು,’ ಎಂದು ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಹೆಸರಿನಲ್ಲಿರುವ ಆದೇಶ ಪತ್ರವೊಂದರಲ್ಲಿ ಹೇಳಲಾಗಿದೆ.
ತಾಲಿಬಾನ್ ಅಧಿಕಾರದಲ್ಲಿದ್ದ ಮೊದಲ ಅವಧಿಯಲ್ಲಿ ಅದರ ಸಚಿವಾಲಯ ಹೊರಡಿಸಿದ್ದ ‘ಇಸ್ಲಾಮಿಕ್ ನೈತಿಕ ಕಾನೂನಿನ‘ ಕಹಿಯನ್ನು ಇದು ನೆನಪಿಸುವಂತಿದೆ.
ಇದೆಲ್ಲದರ ಮಧ್ಯೆಯೂ ತಾಲಿಬಾನ್ ಈ ಬಾರಿ ಮೃದುತ್ವದ ಧೋರಣೆ ಪ್ರದರ್ಶಿಸುವಲ್ಲಿ ಉತ್ಸುಕವಾಗಿದೆ. ಸದ್ಯ ಈ ಆದೇಶವನ್ನು ನಿರಾಕರಿಸಿದ್ದು, ಇವೆಲ್ಲವೂ ಅಪಪ್ರಚಾರ ಎಂದು ಹೇಳಿದೆ.
‘ಇವು ಆಧಾರರಹಿತ ಆರೋಪಗಳು‘ ಎಂದು ತಾಲಿಬಾನ್ ವಕ್ತಾರ ಜಬಿಹ್ ಉಲ್ಲಾ ಮುಜಾಹಿದ್ ಎಂಬುವವರು ಸ್ಪಷ್ಟಪಡಿಸಿದ್ದಾರೆ.
‘ದಾಖಲೆಗಳನ್ನು ತಿರುಚಿ ವದಂತಿಗಳನ್ನು ಹರಡಲಾಗಿದೆ,‘ ಎಂದೂ ಅವರು ತಿಳಿಸಿದ್ದಾರೆ.
ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆದೇಶ ಪತ್ರಗಳು ನಿಜ ಎಂದು ತಾಲಿಬಾನಿ ಆಕ್ರಮಿತ ಪ್ರದೇಶಗಳ ನಾಗರಿಕರು ಹೇಳಿಕೊಂಡಿದ್ದಾರೆ.
‘ರಾತ್ರಿ ಹೊತ್ತು ಯಾರೂ ಹೊರಗೆ ಹೋಗಬಾರದು ಎಂದು ಕಟ್ಟಪ್ಪಣೆ ವಿಧಿಸಲಾಗಿದೆ. ಮುಖ್ಯವಾಗಿ ಯುವಕರು ಕೆಂಪು ಮತ್ತು ಹಸಿರು ಬಣ್ಣದ ಬಟ್ಟೆಗಳನ್ನು ತೊಡುವಂತಿಲ್ಲ. ಅವು ಅಫ್ಗಾನಿಸ್ತಾನದ ಧ್ವಜವನ್ನು ಸೂಚಿಸುವ ಬಣ್ಣಗಳಾಗಿವೆ ಎಂದು ಹೇಳಲಾಗಿದೆ. ಗಂಡಸರು ತಲೆಗೆ ರುಮಾಲು ಸುತ್ತಬೇಕು. ಗಡ್ಡ ತೆಗೆಯಬಾರದು. 16 ವರ್ಷಕ್ಕೆ ಮೇಲ್ಪಟ್ಟ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ನಿರ್ಬಂಧಿಸಿರುವುದಾಗಿ ಅವರು ತಿಳಿಸಿದ್ದಾರೆ,‘ ಎಂದು ತಜಕಿಸ್ತಾನ್ ಗಡಿಗೆ ಹೊಂದಿಕೊಂಡಿರುವ ಯವಾನ್ ಜಿಲ್ಲೆಯ ನಾಗರಿಕರು ಹೇಳಿದ್ದಾರೆ. ಈ ಜಿಲ್ಲೆಯೂ ತಾಲಿಬಾನ್ ವಶಕ್ಕೆ ಸಿಕ್ಕಿದೆ.
ತಾಲಿಬಾನಿಗಳು ಮಾನವ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳನ್ನು ರಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ರಕ್ಷಣೆಯು ಇಸ್ಲಾಮ್ ಮೌಲ್ಯಗಳಿಗೆ ಒಳಪಟ್ಟಿರುತ್ತದೆ ಎಂದು ಅವರು ಹೇಳುತ್ತಾರೆ. ಆದರೆ, ಇಸ್ಲಾಮ್ ಮೌಲ್ಯಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂಬುದು ಆರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.