ಕಾಬೂಲ್:ಅಫ್ಗಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್, ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡದಂತೆ ಮಹಿಳೆಯರಿಗೆ ನಿಷೇಧ ಹೇರಿದೆ. ಈ ಕ್ರಮವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯ ಖಂಡಿಸಿದೆ.
ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಎನ್‌ಜಿಒಗಳು ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸಬೇಕು. ತಪ್ಪಿದರೆ, ಪರವಾನಗಿ ರದ್ದುಪಡಿಸಲಾಗುವುದು ಎಂದು ಅಫ್ಗಾನಿಸ್ತಾನದಹಣಕಾಸು ಸಚಿವಾಲಯವು ಶನಿವಾರ ಸೂಚನೆ ನೀಡಿರುವುದಾಗಿ 'ಟೊಲೊ ನ್ಯೂಸ್' ವರದಿ ಮಾಡಿದೆ.
ಎನ್‌ಜಿಒಗಳಲ್ಲಿನ ಮಹಿಳಾ ಸಿಬ್ಬಂದಿ ಹಿಜಾಬ್ ಧರಿಸದೆ ವಸ್ತ್ರಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಇಲಾಖೆ ರಾಜ್ಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್, 'ವಿಶ್ವದಾದ್ಯಂತ ಮಾನವೀಯ ಕಾರ್ಯಾಚರಣೆಗಳಲ್ಲಿ ಮಹಿಳೆಯರು ಪ್ರಧಾನ ಪಾತ್ರ ನಿರ್ವಹಿಸುತ್ತಾರೆ. ಈ ನಿರ್ಧಾರವು ಅಫ್ಗಾನಿಸ್ತಾನ ಜನರ ಪಾಲಿಗೆ ವಿನಾಶಕಾರಿ. ಇದು ಲಕ್ಷಾಂತರ ಜನರಿಗೆ ನೆರವಾಗುವ ಮತ್ತು ಜೀವ ಉಳಿಸುವ ಕಾರ್ಯಕ್ಕೆ ಅಡ್ಡಿಪಡಿಸಲಿದೆ' ಎಂದು ಕಿಡಿಕಾರಿರುವುದಾಗಿ 'ಬಿಬಿಸಿ' ವರದಿ ಮಾಡಿದೆ.
ಅಫ್ಗಾನ್ ಸರ್ಕಾರದ ಕ್ರಮವು ಮಾನವೀಯ ತತ್ವಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆ ಖಂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.