ಕಾಬೂಲ್: ತಾಲಿಬಾನ್ ಅಫ್ಗಾನಿಸ್ತಾನದಲ್ಲಿ ಸರ್ಕಾರದ ಪ್ರಮುಖ ಕಟ್ಟಡಗಳನ್ನು ತನ್ನ ವಶಕ್ಕೆ ಪಡೆದಿದೆ. ಅಫ್ಗಾನಿಸ್ತಾನದ ಈಶಾನ್ಯ ಭಾಗದಲ್ಲಿರುವ ಕುಂದುಜ್‌ನಲ್ಲಿ ತಾಲಿಬಾನ್ ಉಗ್ರರು ಆಕ್ರಮಣ ಮುಂದುವರಿಸಿದ್ದು, ಹಲವು ಕಟ್ಟಡಗಳನ್ನು ವಶಕ್ಕೆ ಪಡೆದಿದ್ದಾರೆ.
ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿ ಇರಾನ್ ಗಡಿಗೆ ಸಮೀಪದಲ್ಲಿರುವ ಝರಾಂಜ್ ಪ್ರಾಂತ್ಯವನ್ನು ತಾಲಿಬಾನ್ ಉಗ್ರರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ. ಆಗಸ್ಟ್ ಅಂತ್ಯದ ವೇಳೆಗೆ ಅಫ್ಗನ್‌ನಲ್ಲಿ ಸೇನಾ ಕಾರ್ಯಾಚರಣೆಯನ್ನು ಕೊನೆ ಮಾಡುವುದಾಗಿ ಅಮೆರಿಕ ಪ್ರಕಟಿಸಿರುವ ಬೆನ್ನಲ್ಲೇ ತಾಲಿಬಾನ್ ಉಗ್ರರ ಆಕ್ರಮಣ ಹೆಚ್ಚಿದೆ.
ವಾಯುಪಡೆಯ ದಾಳಿಯನ್ನು ತಡೆಯುವ ನಿಟ್ಟಿಯಲ್ಲಿ ಉಗ್ರರು ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿದ್ದು, ಭದ್ರತಾ ಪಡೆಗಳು ಅವುಗಳ ರಕ್ಷಣೆ ಹಾಗೂ ಸೇನಾ ನೆಲೆಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿವೆ. ಶೆಬರ್ಘನ್ ಪ್ರಾಂತ್ಯದ ಹೊರವಲಯದಲ್ಲಿ ಉಗ್ರರು ದಾಳಿ ನಡೆಸಿರುವುದಾಗಿ ಜೊವ್ಜಾನ್ ಪ್ರಾಂತ್ಯದ ಉಪ ಗವರ್ನರ್ ಶನಿವಾರ ತಿಳಿಸಿದ್ದಾರೆ.
ನಗರದ ರಕ್ಷಣೆಗಾಗಿ ಭದ್ರತಾ ಪಡೆಗಳು ಹೋರಾಡುತ್ತಿದ್ದು, 'ಕುಂದುಜ್‌ನಲ್ಲಿ ತೀವ್ರ ಚಕಮಕಿ ನಡೆಯುತ್ತಿದೆ' ಎಂದು ಅಫ್ಗನ್ ಭದ್ರತಾ ಪಡೆಗಳ ವಕ್ತಾರರು ಹೇಳಿದ್ದಾರೆ.
ಆದರೆ, 2,70,000 ಜನಸಂಖ್ಯೆ ಇರುವ ನಗರದ ಪ್ರಮುಖ ಕಟ್ಟಡಗಳನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿದ್ದಾರೆ ಎಂದು ಕುಂದುಜ್ ಪ್ರಾಂತ್ಯದ ಶಾಸಕ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಕುಂದುಜ್ ಸಹ ಸಂಪೂರ್ಣ ತಾಲಿಬಾನ್ ವಶಕ್ಕೆ ಸಿಲುಕುವ ಆತಂಕ ಎದುರಾಗಿದೆ.
'ನಿನ್ನೆ ಮಧ್ಯಾಹ್ನದಿಂದಲೇ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಉಗ್ರರ ನಡುವೆ ತೀವ್ರ ಘರ್ಷಣೆ ನಡೆದಿದೆ. ಸರ್ಕಾರದ ಎಲ್ಲ ಮುಖ್ಯ ಕಚೇರಿಗಳ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ್ದು, ಸೇನಾ ನೆಲೆ ಹಾಗೂ ವಿಮಾನ ನಿಲ್ದಾಣ ಮಾತ್ರವೇ ಅಫ್ಗನ್ ಭದ್ರತಾ ಪಡೆಯ ರಕ್ಷಣೆಯಲ್ಲಿವೆ. ಅಲ್ಲಿಂದಲೇ ಸೇನೆಯು ತಾಲಿಬಾನಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಕುಂದುಜ್ ಪ್ರಾಂತ್ಯದ ವಿಧಾನಸಭಾ ಸದಸ್ಯ ಅಮರುದ್ದೀನ್ ವಾಲಿ ಹೇಳಿದ್ದಾರೆ.
ರಕ್ಷಣಾ ಸಚಿವಾಲಯದ ವಕ್ತಾರ ರೊಹುಲ್ಲಾಹ್ ಅಹಮದ್ಜಾಯ್ ಪರಿಸ್ಥಿತಿಯ ಕುರಿತು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, 'ವಿಶೇಷ ಪಡೆಗಳು ಕುಂದುಜ್‌ನಲ್ಲಿವೆ ಹಾಗೂ ನಗರದಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿವೆ. ತಾಲಿಬಾನ್ ಉಗ್ರರು ವಶಕ್ಕೆ ಪಡೆದಿರುವ ಮಾಧ್ಯಮ ಕಚೇರಿಗಳನ್ನು ಮರಳಿ ಪಡೆಯುವ ಕಾರ್ಯಾಚರಣೆ ನಡೆದಿದೆ' ಎಂದಿದ್ದಾರೆ.
ಕುಂದುಜ್‌ನ ಆರೋಗ್ಯ ಅಧಿಕಾರಿಗಳ ಪ್ರಕಾರ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14 ಜನರ ಮೃತದೇಹಗಳು ಹಾಗೂ ಗಾಯಗೊಂಡಿರುವ 30ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.