ಕಾಬೂಲ್: ಅಫ್ಗಾನಿಸ್ತಾನದ ಮೇಲೆಬಿಗಿ ಹಿಡಿತ ಸಾಧಿಸಿರುವ ತಾಲಿಬಾನ್, ಭಾನುವಾರ ಕಾಬೂಲ್ ನಗರದ ಹೊರವಲಯವನ್ನು ಪ್ರವೇಶಿಸಿದೆ.
ಆದರೆ, ರಾಜಧಾನಿಯನ್ನು ಬಲವಂತದಿಂದ ವಶಪಡಿಸಿಕೊಳ್ಳುವುದಿಲ್ಲ ಎಂದು ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾರೆ.
‘ಯಾವುದೇ ವ್ಯಕ್ತಿಯ ಜೀವ, ಆಸ್ತಿ ಮತ್ತು ಘನತೆಗೆ ಧಕ್ಕೆ ತರುವುದಿಲ್ಲ. ಕಾಬೂಲ್ ನಾಗರಿಕರ ಜೀವಕ್ಕೂ ಯಾವುದೇ ರೀತಿಯ ಅಪಾಯವಿಲ್ಲ’ ಎಂದು ತಾಲಿಬಾನ್ ತಿಳಿಸಿದೆ.
ಕಾಬೂಲ್ ಬಳಿಯ ಕಲಕನ್, ಖರಾಬಾಗ್ ಮತ್ತು ಪಘಮಾನ್ ಜಿಲ್ಲೆಗಳಲ್ಲಿ ತಾಲಿಬಾನ್ ಉಗ್ರರು ಬೀಡುಬಿಟ್ಟಿದ್ದಾರೆ ಎಂದು ಅಘ್ಗಾನಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ನಾಗರಿಕರು ಕಾಬೂಲ್‌ನ ಉದ್ಯಾನಗಳಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಎಟಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ತಾವು ಉಳಿತಾಯ ಮಾಡಿದ ಹಣ ವಾಪಸ್ ಪಡೆಯಲು ನೂರಾರು ಮಂದಿ ಖಾಸಗಿ ಬ್ಯಾಂಕ್‌ಗಳ ಮುಂದೆ ಸೇರಿದ್ದಾರೆ. ಆತಂಕಗೊಂಡ ನೌಕರರು ಸರ್ಕಾರಿ ಕಚೇರಿಗಳಿಂದ ಪರಾರಿಯಾಗಿದ್ದಾರೆ.
ಹಲವೆಡೆ ಬಂದೂಕಿನ ಗುಂಡುಗಳನ್ನು ಸಿಡಿಸಿರುವ ಶಬ್ದಗಳು ಕೇಳಿ ಬಂದಿದೆ. ಆದರೆ, ದಾಳಿಯನ್ನು ಅಫ್ಗನ್ ಅಧ್ಯಕ್ಷರ ಕಚೇರಿ ತಳ್ಳಿ ಹಾಕಿದೆ.
‘ಅಂತರರಾಷ್ಟ್ರೀಯ ಪಡೆಗಳ ನೆರವಿನೊಂದಿಗೆ ಭದ್ರತಾ ಪಡೆಗಳು ಕಾಬೂಲ್ ನಗರವನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ತಿಳಿಸಿದೆ.
ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಹೆಲಿಕಾಪ್ಟರ್‌ಗಳು ಬಂದಿಳಿದಿವೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವ ಯುಎಚ್–60 ಹೆಲಿಕಾಪ್ಟರ್‌ಗಳು ಇವಾಗಿವೆ.
ಅಮೆರಿಕ ರಾಯಭಾರಿ ಕಚೇರಿ ಸಮೀಪ ಸಣ್ಣದಾಗಿ ಹೊಗೆ ಕಾಣಿಸಿಕೊಂಡಿದೆ. ಹಲವು ಸೂಕ್ಷ್ಮ ದಾಖಲೆಗಳಿಗೆ ರಾಜತಾಂತ್ರಿಕರು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ ಎಂದು ಅಮೆರಿಕದ ಇಬ್ಬರು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.