ಕಾಬೂಲ್: ಅಫ್ಗಾನಿಸ್ತಾನದ ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯೂ) ಸಂಗ್ರಹಿಸಿರುವ ಹೊಸ ಪಟ್ಟಿಯ ಪ್ರಕಾರ, ತಾಲಿಬಾನ್‌ಗಳು ಕನಿಷ್ಠ 32 ವಿವಿಧ ವಿಭಾಗಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.
ಇದರಲ್ಲಿ, ಶಿಕ್ಷಣದ ಹಕ್ಕಿಗೆ ನಿರ್ಬಂಧ ಹೇರಿರುವುದು ಅತ್ಯಂತ ದೊಡ್ಡ ತಾರತಮ್ಯವಾಗಿದೆ ಎಂದು ಎಚ್‌ಆರ್‌ಡಬ್ಲ್ಯೂ ಹೇಳಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿವೆ.
ಶಿಕ್ಷಣ, ಉದ್ಯೋಗ, ಚಲನೆಯ ಸ್ವಾತಂತ್ರ್ಯ, ಉಡುಗೆ, ಆರೋಗ್ಯ ರಕ್ಷಣೆ ಮತ್ತು ಕ್ರೀಡೆಗೆ ಪ್ರವೇಶ. ಲಿಂಗ ಆಧಾರಿತ ಹಿಂಸೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ತಾಲಿಬಾನ್ ನಿರ್ಬಂಧಿಸುತ್ತಿದೆ ಎಂದು ಎಚ್‌ಆರ್‌ಡಬ್ಲ್ಯೂ ಮಹಿಳಾ ಹಕ್ಕುಗಳ ವಿಭಾಗದ ಹಂಗಾಮಿ ನಿರ್ದೇಶಕಿ ಹೀದರ್ ಬರ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ 1996 ಮತ್ತು 2001ರ ನಡುವೆ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ತಾಲಿಬಾನ್, ಮಹಿಳೆಯರು ಕುಟುಂಬದ ಪುರುಷ ಸದಸ್ಯರೊಂದಿಗೆ ಮಾತ್ರ ಹೊರಗೆ ತೆರಳಲು ಅವಕಾಶ ನೀಡಿದ್ದರು.
ಇದು ಅಧಿಕೃತವಾಗಿ ರಾಷ್ಟ್ರೀಯ ನೀತಿಯಾಗಿಲ್ಲ, ಆದರೆ, ಕಳೆದ ವಾರ ಹೆರಾತ್ ನಗರದಲ್ಲಿ ಹೆಚ್‌ಆರ್‌ಡಬ್ಲ್ಯೂ ಸಂಶೋಧನೆಯಲ್ಲಿ ತಾಲಿಬಾನ್ ಅಧಿಕಾರಿಗಳು ಮತ್ತು ಹೋರಾಟಗಾರರು ಬೀದಿಗಳಲ್ಲಿ ಜಾರಿಗೊಳಿಸುತ್ತಿರುವುದು ಕಂಡುಬಂದಿದೆ.
ತಾಲಿಬಾನ್ ಕ್ಯಾಬಿನೆಟ್‌ನಲ್ಲಿ ಯಾವುದೇ ಮಹಿಳಾ ಸದಸ್ಯರಿಲ್ಲ, ಮಹಿಳಾ ವ್ಯವಹಾರಗಳ ಸಚಿವಾಲಯ ಸರ್ಕಾರದಿಂದ ಕಣ್ಮರೆಯಾಗಿದೆ.
ಹೆರಾತ್‌ನಲ್ಲಿ ತಾಲಿಬಾನ್ ಹೋರಾಟಗಾರರು ಕೈಗವಸುಗಳನ್ನು ಧರಿಸದ ಮತ್ತು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಲಿಂಗ ಆಧಾರಿತ ಹಿಂಸೆಯನ್ನು ನಿಭಾಯಿಸುವ ವ್ಯವಸ್ಥೆ, ಕಾನೂನುಗಳು ನಾಶವಾಗಿವೆ ಎಂದು ಹೀದರ್ ಹೇಳಿದ್ದಾರೆ.
ಅಪಾಯದ ಹೊರತಾಗಿಯೂ, ಅನೇಕ ಧೈರ್ಯಶಾಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ದುಡಿಯುವ ಮಹಿಳೆಯರು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ, ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ಮಹಿಳೆಯರನ್ನು ಹೊರತುಪಡಿಸಿ ಸರ್ಕಾರಿ ಕೆಲಸದಲ್ಲಿದ್ದ ಉಳಿದೆಲ್ಲ ಮಹಿಳೆಯರನ್ನು ತಾಲಿಬಾನ್ ಸರ್ಕಾರ ವಜಾಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.