ಕಾಬುಲ್: ಅಫ್ಗಾನಿಸ್ತಾನದಲ್ಲಿ ತನ್ನ ಪಾರುಪತ್ಯ ಸ್ಥಾಪಿಸಿಕೊಂಡಿರುವ ತಾಲಿಬಾನ್, ಮಹಿಳೆಯರು ಇಸ್ಲಾಮಿಕ್ ಹಿಜಾಬ್ ಧರಿಸದೆ, ಪುರುಷ ಸಂಬಂಧಿ ಜೊತೆಗಿರದೆ ದೂರದ ಊರಿಗೆ ಪ್ರಯಾಣಿಸುವಂತಿಲ್ಲ ಎಂಬ ನಿಯಮಗಳನ್ನು ಹೇರಿದೆ.
ಮಹಿಳೆಯ ಜೊತೆಗೆ ಬರುವ ಸಂಬಂಧಿಯು ಆಕೆಯ ಖಾಸಾ ಪುರುಷ ಸಂಬಂಧಿ ಆಗಿರಬೇಕು ಎಂಬುದನ್ನು ಒತ್ತಿ ಹೇಳಿದೆ.
ಸ್ಥಳೀಯ ಸಂಚಾರವನ್ನು ಹೊರತುಪಡಿಸಿ, ದೂರದೂರಿಗೆ ಪ್ರಯಾಣಿಸಲು ಮಹಿಳೆಯರಿಗೆ ಆಕೆಯ ಜೊತೆಗೆ ಹತ್ತಿರದ ಪುರುಷ ಸಂಬಂಧಿ ಇದ್ದರಷ್ಟೇ ಅವಕಾಶ ನೀಡಬೇಕು. ಇಸ್ಲಾಮಿಕ್ ಹಿಜಾಬ್ ಧರಿಸಿದ ಮಹಿಳೆಯರಿಗಷ್ಟೇ ಪ್ರಯಾಣಿಸಲು ಅವಕಾಶ ನೀಡಬೇಕು ಎಂದು ವಾಹನಗಳ ಮಾಲೀಕರಿಗೆ ತಾಲಿಬಾನ್ ಅಧಿಕಾರಿಗಳು ಸೂಚಿಸಿದ್ದಾರೆ.
ಈ ಬಗ್ಗೆ ತಾಲಿಬಾನ್ ಸರ್ಕಾರದ ಸಚ್ಚಾರಿತ್ಯ ಬೆಂಬಲ ಮತ್ತು ದುರಾಚಾರ ನಿಯಂತ್ರಣ ಸಚಿವಾಲಯದ ವಕ್ತಾರ ಸಾದಿಕ್ ಅಕಿಫ್ ಮುಹಜಿರ್ 'ಎಎಫ್‌ಪಿ'ಗೆ ಸ್ಪಷ್ಟನೆ ನೀಡಿದ್ದಾರೆ. 'ಹತ್ತಿರದ ಪುರುಷ ಸಂಬಂಧಿ ಜೊತೆಗಿರದ ಮಹಿಳೆಯರಿಗೆ 72 ಕಿ.ಮೀ.ಗಿಂತ ಹೆಚ್ಚು ದೂರದ ಪ್ರಯಾಣಕ್ಕೆ ಅವಕಾಶವಿಲ್ಲ' ಎಂದಿದ್ದಾರೆ.
ಅಫ್ಗಾನಿಸ್ತಾನದ ಟಿವಿ ವಾಹಿನಿಗಳಿಗೆ ಮಹಿಳಾ ನಟಿಯರಿರುವ ಜಾಹೀರಾತು, ನಾಟಕಗಳನ್ನೆಲ್ಲ ಪ್ರದರ್ಶಿಸಕೂಡದು ಎಂದು ತಾಕೀತು ಮಾಡಿದ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಮಹಿಳೆಯರ ಪ್ರಯಾಣಕ್ಕೆ ಸಂಬಂಧಿಸಿದ ಹೊಸ ನಿಯಮಗಳು ವ್ಯಾಪಕವಾಗಿ ಹರಿದಾಡಿದ್ದವು. ಇದೀಗ ತಾಲಿಬಾನ್ ಸಚಿವಾಲಯದ ವಕ್ತಾರ ಹೊಸ ನಿಯಮಗಳ ಕುರಿತಾದ ಸ್ಪಷ್ಟನೆಯನ್ನು ನೀಡಿದ್ದಾರೆ.
ಟಿವಿ ಪತ್ರಕರ್ತೆಯರಿಗೂ ಹಿಜಾಬ್ ಧರಿಸಿ ಸುದ್ದಿ ನೀಡಬೇಕು. ಸ್ವಂತ ವಾಹನಗಳಲ್ಲಿ ಪ್ರಯಾಣಿಸುವಾಗ ಸಂಗೀತ ಕೇಳುವುದನ್ನು ನಿಲ್ಲಿಸಬೇಕು ಎಂಬಿತ್ಯಾದಿ ನಿಯಮಗಳನ್ನು ಹೇರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.