ADVERTISEMENT

ತಾಲಿಬಾನ್‌ಗಳ ನಡೆ ನೋಡಿ ನಿರ್ಧರಿಸಬೇಕೇ ಹೊರತು ನುಡಿಯನ್ನಲ್ಲ: ಬೋರಿಸ್‌ ಜಾನ್ಸನ್‌

ಪಿಟಿಐ
Published 24 ಆಗಸ್ಟ್ 2021, 7:02 IST
Last Updated 24 ಆಗಸ್ಟ್ 2021, 7:02 IST
ಬೋರಿಸ್‌ ಜಾನ್ಸನ್‌
ಬೋರಿಸ್‌ ಜಾನ್ಸನ್‌   

ಲಂಡನ್‌: ‘ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ಗಳು ನಡೆಸುತ್ತಿರುವ ಕಾರ್ಯಗಳನ್ನು ನೋಡಿ ನಿರ್ಣಯ ತೆಗೆದುಕೊಳ್ಳಬೇಕೇ ಹೊರತು ಅವರ ಮಾತುಗಳನ್ನು ಕೇಳಿಯಲ್ಲ’ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ತಿಳಿಸಿದ್ದಾರೆ.

ಅಫ್ಗಾನಿಸ್ತಾನದ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮಂಗಳವಾರ ನಡೆಯಲಿರುವ ‘ಜಿ 7’ ದೇಶಗಳ ತುರ್ತು ವರ್ಚುವಲ್‌ ಸಭೆಯ ಹಿಂದಿನ ದಿನವಾದ ಸೋಮವಾರ ಅವರು ಮಾತನಾಡಿದರು. ಜಾನ್ಸನ್‌ ಅವರು ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಬ್ರಿಟನ್‌ ಪ್ರಧಾನಿಯ ಜತೆಗೆ, ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌ ಮತ್ತು ಅಮೆರಿಕದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಫ್ಗನ್‌ ಜನರ ಪರವಾಗಿ ನಿಲುವು ತಾಳುವುದು ಹಾಗೂ ನಿರಾಶ್ರಿತರಿಗೆ ಮತ್ತು ಮಾನವೀಯತೆಯ ನೆಲಗಟ್ಟಿನಲ್ಲಿ ಬೆಂಬಲ ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚೆಗಳಾಗಲಿವೆ.

ADVERTISEMENT

‘ನಮ್ಮ ಮೊದಲ ಆದ್ಯತೆ ನಮ್ಮ ನಾಗರಿಕರು ಮತ್ತು 20 ವರ್ಷಗಳಲ್ಲಿ ನಮ್ಮ ಪ್ರಯತ್ನಗಳಿಗೆ ನೆರವು ನೀಡಿದ ಅಫ್ಗನ್ನರನ್ನು ಸ್ಥಳಾಂತರಿಸುವುದಾಗಿದೆ’ ಎಂದು ಜಾನ್ಸನ್ ಹೇಳಿದ್ದಾರೆ.

ಅಮೆರಿಕ ನೇತೃತ್ವದ ನ್ಯಾಟೊ ಪಡೆಗಳು ಕಾಬೂಲ್‌ನಿಂದ ನಿರ್ಗಮಿಸಲು ನಿಗದಿ ಮಾಡಿರುವ ಆಗಸ್ಟ್ 31ರ ಗಡುವನ್ನು ವಿಸ್ತರಿಸಲು ತಾಲಿಬಾನ್‌ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜಿ7 ರಾಷ್ಟ್ರಗಳ ತುರ್ತು ಸಭೆ ಆಯೋಜಿಸಲಾಗಿದೆ.‌

ಇದರ ಬೆನ್ನಲ್ಲೇ ಜಾನ್ಸನ್‌ ಅವರು ಸೋಮವಾರ ಸಂಜೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಅಫ್ಗನ್‌ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಎದುರಾಗಿರುವ ಮಾನವೀಯ ಬಿಕ್ಕಟ್ಟನ್ನು ತಡೆಗಟ್ಟಲು ಸಂಘಟಿತ ರಾಜತಾಂತ್ರಿಕ ಪ್ರಯತ್ನವನ್ನು ಮುಂದುವರಿಸುವ ಕುರಿತು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಜಾನ್ಸನ್‌ ಅವರ ವಕ್ತಾರರು ತಿಳಿಸಿದ್ದಾರೆ.

ಬ್ರಿಟಿಷ್‌ ಪ್ರಜೆಗಳು, ಅವರ ಅವಲಂಬಿತರು, ರಾಯಭಾರ ಸಿಬ್ಬಂದಿ ಸೇರಿದಂತೆ ಸುಮಾರು 6,000 ಜನರನ್ನು ಕಳೆದ ವಾರದಿಂದ ಇಲ್ಲಿಯವರೆಗೂ ಕಾಬೂಲ್‌ನಿಂದ ಸ್ಥಳಾಂತರಿಸಿರುವುದಾಗಿ ಬ್ರಿಟನ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.