‘ಸರ್ಕಸ್’ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಕ್ರಿಕೆಟ್ ಹಾಗೂ ಫುಟ್ಬಾಲ್ ಆಡುವ ಆನೆ, ರಿಂಗ್ ಹಾರುವ ಸಿಂಹ, ಹಗ್ಗದ ಮೇಲೆ ನಡೆಯುವ ಕಪ್ಪು ಹುಲಿ, ಗುರುತ್ವಾಕರ್ಷಣೆಯನ್ನು ಸೀಳುತ್ತ ಸುತ್ತುವ ಬೈಕ್‌ಗಳು, ದೇಹವನ್ನು ರಬ್ಬರ್‌ನಂತೆ ಬೇಕಾದಂತೆ ಬಾಗಿಸುವ ಪಟುಗಳು, ಇಡೀ ಪ್ರದರ್ಶನವನ್ನು ನಿಯಂತ್ರಿಸುವ ‘ರಿಂಗ್ ಮಾಸ್ಟರ್’ ದೃಶ್ಯ ನೆನಪಿನಂತೆ ಮೇಲೇಳುತ್ತವೆ. ಇತ್ತೀಚೆಗೆ ಇಂಥದ್ದೇ ಒಂದು ಸರ್ಕಸ್‌ನಲ್ಲಿ ರಿಂಗ್ ಮಾಸ್ಟರ್ ಮೇಲೆ ಕೋಪಗೊಂಡ ದೈತ್ಯ ಸಿಂಹ ದಂತ ಪಂಕ್ತಿಗಳನ್ನು ತೋರುತ್ತ ದಾಳಿ ಮಾಡಿತು. ಇದರ ವಿಡಿಯೊ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಲವು ರಾಷ್ಟ್ರಗಳಲ್ಲಿ ಸರ್ಕಸ್‌ನಲ್ಲಿ ಪ್ರಾಣಿಗಳನ್ನು ಬಳಸುವುದಕ್ಕೆ ನಿಷೇಧವಿದೆ. ಉಕ್ರೇನ್‌ನ ಸರ್ಕಸ್ ಕಂಪನಿಯೊಂದರ ಪ್ರದರ್ಶನದ ಸಂದರ್ಭದಲ್ಲಿ ಪ್ರೇಕ್ಷಕರ ಮುಂದೆಯೇ ಈ ಘಟನೆ ನಡೆದಿದೆ. ಸರ್ಕಸ್ ತರಬೇತುದಾರ ಅಥವಾ ರಿಂಗ್ ಮಾಸ್ಟರ್ ಹಮದಾ ಕೌತ ಮೇಲೆ ಇತ್ತೀಚೆಗೆ ಸಿಂಹವೊಂದು ಪ್ರದರ್ಶನದ ನಡುವೆಯೇ ದಾಳಿ ನಡೆಸಿದೆ. ಇದನ್ನು ಕಂಡ ಪ್ರೇಕ್ಷಕರು ಚೀರಿದ್ದಾರೆ, ಮಕ್ಕಳೊಂದಿಗೆ ಬಂದಿದ್ದ ಕೆಲವರು ಗಾಬರಿಗೊಂಡ ಸರ್ಕಸ್ ಸ್ಥಳದಲ್ಲಿ ಹೊರ ಓಡಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ತರಬೇತುದಾರನ ಮೇಲೆ ಸಿಂಹ ದಾಳಿ ನಡೆಸಿ, ತೋಳನ್ನು ಬಲವಾಗಿ ಕಚ್ಚಿ ಹಿಡಿದು ನೆಲಕ್ಕುರುಳಿಸುವುದನ್ನು ಕಾಣಬಹುದು. ಪ್ರದರ್ಶನಕ್ಕಾಗಿ ಬಳಕೆಯಾಗಿದ್ದ ಹಿನ್ನೆಲೆ ಸಂಗೀತವು ಅರ್ಧಕ್ಕೆ ನಿಲ್ಲುತ್ತಿದ್ದಂತೆ ಪ್ರೇಕ್ಷಕರ ಚೀರಾಟವನ್ನೂ ಕೇಳಬಹುದು. ತರಬೇತುದಾರ ತನ್ನ ನೈಪುಣ್ಯತೆ ಬಳಸಿ ತೋಳನ್ನು ಸಿಂಹದ ಬಾಯಿಯಿಂದ ರಕ್ಷಿಸಿಕೊಂಡಿದ್ದಾರೆ. ಈ ಜಟಾಪಟಿಯಲ್ಲಿ ಆತ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನೇಕರು ಈ ಘಟನೆಯ ದೃಶ್ಯ ಚಿತ್ರೀಕರಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೊ ಸಾವಿರಾರು ಬಾರಿ ಹಂಚಿಕೆಯಾಗಿದೆ.
ಬೆನ್ನು, ತೋಳು ಹಾಗೂ ಕಾಲಿನ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವ ತರಬೇತುದಾರ, ’ಸಿಂಹ ಜಿಗಿದು ನನ್ನ ಮೇಲೆ ದಾಳಿ ಮಾಡಿತು. ಆದರೆ ದೇವರ ಕೃಪೆ ನನ್ನ ಕುತ್ತಿಗೆಯನ್ನು ಹಿಡಿಯಲಿಲ್ಲ. ಕೆಲವೇ ಕ್ಷಣಗಳಲ್ಲಿ ಸಿಂಹ ಹಿಡಿತ ಸಡಿಲಿಸಿತು’ ಎಂದು ಅನುಭವ ಹಂಚಿಕೊಂಡಿರುವುದಾಗಿ ವರದಿಯಾಗಿದೆ.
ನಾನು ಒಂದು ಸಿಂಹವನ್ನು ಮುಂದೆ ಬರುವಂತೆ ಸೂಚನೆ ನೀಡಿದೆ. ಆದರೆ, ಮತ್ತೊಂದು ಸಿಂಹ ಮುಂದಿನಿಂದ ದಾಳಿ ನಡೆಸಿತು. ಘಟನೆಯ ನಂತರವೂ ಪ್ರದರ್ಶನ ನಿಲ್ಲಿಸಲಿಲ್ಲ.ಯಾರೂ ಗಾಬರಿಗೊಳ್ಳದಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದೆ ಹಾಗೂ ಪ್ರದರ್ಶನ ಮುಂದುವರಿಯಿತು. ಹೊಸ ಸ್ಥಳಗಳಲ್ಲಿ ಸಿಂಹಗಳು ಬಹುಬೇಗ ಹೊಂದಿಕೊಳ್ಳುವುದಿಲ್ಲ, ಇದರಿಂದಾಗಿ ಈ ದಾಳಿ ನಡೆದಿದೆ ಎಂದು ವಿವರಿಸಿದ್ದಾರೆ.
ಈ ಘಟನೆಯ ಬಳಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಾಣಿ ದಯಾ ಸಂಘಗಳು ಸರ್ಕಸ್‌ನಲ್ಲಿ ಸಿಂಹಗಳ ಪ್ರದರ್ಶನ, ಬಳಕೆ ನಿಷೇಧಿಸುವಂತೆ ಒತ್ತಾಯಿಸಿವೆ.
ಎರಡು ವರ್ಷಗಳ ಹಿಂದೆ ಚೀನಾದಲ್ಲಿಯೂ ಇಂಥದ್ದೇ ಘಟನೆ ಸಂಭವಿಸಿತ್ತು. ಪ್ರದರ್ಶನದ ಮಧ್ಯೆ ಸಿಂಹವೊಂದು ತರಬೇತುದಾರನನ್ನು ಕಚ್ಚಿ ಹಿಡಿದು ವೇದಿಕೆ ಮೇಲೆ ಎಳೆದಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.