ADVERTISEMENT

ಅಫ್ಗಾನಿಸ್ತಾನ | ಭಯೋತ್ಪಾದಕರಿಗೆ ಹೆಚ್ಚು ಸ್ವಾತಂತ್ರ್ಯ: UNO ಮುಖ್ಯಸ್ಥ ಅಸಮಾಧಾನ

ತಾಲಿಬಾನ್ ಸರ್ಕಾರದ ವಿರುದ್ಧ ವಿಶ್ವಸಂಸ್ಥೆಯ ಮುಖ್ಯಸ್ಥ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 13:47 IST
Last Updated 16 ಫೆಬ್ರುವರಿ 2024, 13:47 IST
   

ವಿಶ್ವಸಂಸ್ಥೆ: ‘ಅಫ್ಗಾನಿಸ್ತಾನದಲ್ಲಿ 2021ರಲ್ಲಿ ಜನರಿಂದ ಆಯ್ಕೆಯಾಗಿದ್ದ ಸರ್ಕಾರವನ್ನು ಕೆಡವಿ ಅಧಿಕಾರದ ಚುಕ್ಕಾಣಿ ಹಿಡಿದ ತಾಲಿಬಾನ್, ದೇಶದಲ್ಲಿ ವಿದೇಶಿ ಭಯೋತ್ಪಾದಕರನ್ನು ಮಟ್ಟಹಾಕಲು ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ’ ಎಂದು ವಿಶ್ವಸಂಸ್ಥೆಯ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವರದಿ ತಿಳಿಸಿದೆ.

ತಾಲಿಬಾನ್ ಆಳ್ವಿಕೆಯ ಅಫ್ಗಾನಿಸ್ತಾನದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಭಯೋತ್ಪಾದಕ ಸಂಘಟನೆಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲಾಗಿದೆ. ಅಲ್ಲದೆ, ಹಲವು ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಐಎಸ್ಐಎಲ್–ಕೆ ಭಯೋತ್ಪಾದಕ ಸಂಘಟನೆಯಲ್ಲಿ 2,200ರಷ್ಟಿದ್ದ ಸದಸ್ಯರ ಸಂಖ್ಯೆಯು ದ್ವಿಗುಣಗೊಂಡಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಅಂತರರಾಷ್ಟ್ರೀಯ ಶಾಂತಿಗೆ ಐಎಸ್ ಬೆದರಿಕೆ:

ADVERTISEMENT

ರಾಜಕೀಯ ಅಸ್ಥಿರತೆ ಇರುವ ಪಶ್ಚಿಮ ಆಫ್ರಿಕಾ ಮತ್ತು ಸಹೇಲ್ ಪ್ರಾಂತ್ಯದಲ್ಲಿನ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯು (ಐಎಸ್) ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡಿದೆ. ಜೊತೆಗೆ ಇಲ್ಲಿನ ಭಯೋತ್ಪಾದಕ ಸಂಘಟನೆಗಳು ಹೊರದೇಶಗಳಲ್ಲಿ ದಾಳಿ ನಡೆಸುತ್ತವೆ ಎಂದು ವಿಶ್ವಸಂಸ್ಥೆಯ ಭಯೋತ್ಪಾದಕ ನಿಗ್ರಹ ಮುಖ್ಯಸ್ಥ ವ್ಲಾದಿಮಿರ್ ವೊರನ್‌ಕೋಫ್ ಗುರುವಾರ ತಿಳಿಸಿದ್ದಾರೆ. 

ಭಯೋತ್ಪಾದನೆ ನಿಗ್ರಹಕ್ಕೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಹಲವು ಕ್ರಮಗಳನ್ನು ಕೈಗೊಂಡಿರುವ ಹೊರತಾಗಿಯೂ, ಐಎಸ್ ಸಂಘಟನೆಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯೊಡ್ಡುತ್ತಿದೆ. ವಿಶೇಷವಾಗಿ ಸಂಘರ್ಷ ಪೀಡಿತ ವಲಯಗಳಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಈ ಹಿಂದೆ ಇರಾಕ್, ಸಿರಿಯಾ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಮಾತ್ರ ಬಿಗಿ ಹಿಡಿತ ಹೊಂದಿದ್ದ ಈ ಸಂಘಟನೆಯು, ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.