ಬೀಜಿಂಗ್: ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಸಾರ್ವಜನಿಕ ಭದ್ರತಾ ಸಚಿವ ವಾಂಗ್ ಷಿಯಾಂಗ್ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಮಾತುಕತೆ ನಡೆಸಿದರು.
ಉಭಯ ದೇಶಗಳ ನಡುವಿನ ವಿವಾದಾತ್ಮಕ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಈ ವೇಳೆ ಚರ್ಚೆಗಳು ನಡೆದಿವೆ. ಈ ವಿಷಯಗಳಲ್ಲಿ ಪರಸ್ಪರ ತಪ್ಪು ತಿಳಿವಳಿಕೆ ಮತ್ತು ತಪ್ಪು ಲೆಕ್ಕಾಚಾರಗಳಿಂದ ಆಗುವ ಅಪಾಯಗಳ ಕುರಿತು ಎಚ್ಚರವಹಿಸಬೇಕು ಎಂದು ನಾಯಕರು ಚರ್ಚಿಸಿದ್ದಾರೆ.
ಚೀನಾ ಭೇಟಿಯಲ್ಲಿರುವ ಬ್ಲಿಂಕನ್ ಅವರು ಶುಕ್ರವಾರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಆದರೆ, ಇದು ಮೊದಲೇ ನಿಗದಿಯಾಗಿದ್ದ ಸಭೆಯಲ್ಲ ಎಂದು ಅಮೆರಿಕ ಹೇಳಿದೆ.
ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿರುವ ಬೆನ್ನಲ್ಲೇ, ಉಭಯ ದೇಶಗಳ ನಾಯಕರೊಂದಿಗೆ ಮಾತುಕತೆಗಳೂ ಹೆಚ್ಚಾಗಿವೆ. ಭವಿಷ್ಯದಲ್ಲಿಯೂ ಎರಡೂ ದೇಶಗಳು ಮಾತುಕತೆ ನಡೆಸುವ ಕುರಿತು ನಾಯಕರು ಬದ್ಧತೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಭದ್ರತೆಗೆ ಬೆದರಿಕೆ ಹಾಕುವಂತಹ ಬೆಳವಣಿಗೆಗಳ ಬಗ್ಗೆ ನಾಯಕರು ವಿಷಾದ ವ್ಯಕ್ತಪಡಿಸಿದ್ದಾರೆ.
ತೈವಾನ್, ದಕ್ಷಿಣ ಚೀನಾ ಸಮುದ್ರ, ವ್ಯಾಪಾರ ಹಾಗೂ ಮಾನವ ಹಕ್ಕು, ರಷ್ಯಾಕ್ಕೆ ಚೀನಾದ ಬೆಂಬಲ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಿವೆ ಎಂದು ತಿಳಿದು ಬಂದಿದೆ. ಚರ್ಚೆಯ ಆರಂಭದಲ್ಲಿ ವಾಂಗ್ ಅವರು, ಚೀನಾ– ಅಮೆರಿಕ ಸಂಬಂಧ ಸ್ಥಿರಗೊಳ್ಳಲು ಪ್ರಾರಂಭವಾಗಿದೆ. ಆದರೆ, ಅದೇ ಸಮಯದಲ್ಲಿ ಸಂಬಂಧದಲ್ಲಿನ ನಕಾರಾತ್ಮಕ ಅಂಶಗಳೂ ಹೆಚ್ಚುತ್ತಿದ್ದು, ಈ ಅಡೆತಡೆಗಳನ್ನು ನಿವಾರಿಸಬೇಕಿದೆ ಎಂದಿದ್ದಾರೆ.
‘ತನಗೆ ಸೂಕ್ತವೆಂದು ಭಾವಿಸುವ ದೇಶಗಳೊಂದಿಗೆ ಸಂಬಂಧ ಬೆಳೆಸುವ ಹಕ್ಕು ಚೀನಾಗೆ ಇದೆ. ನಾವು ಯಾವಾಗಲೂ ಪರಸ್ಪರರ ಹಿತಾಸಕ್ತಿಗಳನ್ನು ಗೌರವಿಸಬೇಕು. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಮಧ್ಯಪ್ರವೇಶಿಸಬಾರದು ಎಂದು ಒತ್ತಾಯಿಸುತ್ತೇವೆ. ಚೀನಾದ ಅಭಿವೃದ್ಧಿಯನ್ನು ತಡೆಹಿಡಿಯಲು ಪ್ರಯತ್ನಿಸಬೇಡಿ ಮತ್ತು ಚೀನಾದ ಸಾರ್ವಭೌಮತ್ವ, ಭದ್ರತೆ, ಅಭಿವೃದ್ಧಿಯ ಹಿತಾಸಕ್ತಿಗಳ ಹಸ್ತಕ್ಷೇಪ ಮಾಡಬೇಡಿ’ ಎಂದು ವಾಂಗ್ ಯಿ ಅವರು ಬ್ಲಿಂಕೆನ್‌ಗೆ ತಿಳಿಸಿದ್ದಾರೆ.
‘ಭಿನ್ನಾಭಿಪ್ರಾಯ ಇರುವ ಪ್ರದೇಶಗಳು ಮತ್ತು ನಮ್ಮ ನಿಲುವಿನ ಬಗ್ಗೇ ಸ್ಪಷ್ಟ ಮತ್ತು ನಿಖರವಾಗಿದ್ದೇವೆ. ಚೀನಾ ಸಹ ಇದೇ ರೀತಿ ಇರುತ್ತದೆ ಎಂದು ಭಾವಿಸುತ್ತೇನೆ. ಈ ವಿಚಾರದಲ್ಲಿ ತಪ್ಪುಗ್ರಹಿಕೆ ಮತ್ತು ತಪ್ಪು ಲೆಕ್ಕಾಚಾರಗಳನ್ನು ಬಿಡಬೇಕಿದೆ’ ಎಂದು ಬ್ಲಿಂಕೆನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.