ADVERTISEMENT

ಮತ್ತೆ ಟ್ರಂಪ್ ಹತ್ಯೆ ಯತ್ನ? ಪ್ರೆಸ್ ಪಾಸ್‌ನೊಂದಿಗೆ ಗನ್ ತಂದಿದ್ದವನ ಬಂಧನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ಮತ್ತೊಮ್ಮೆ ನಡೆದಿರುವುದು ವರದಿಯಾಗಿದೆ.

ಏಜೆನ್ಸೀಸ್
Published 14 ಅಕ್ಟೋಬರ್ 2024, 4:41 IST
Last Updated 14 ಅಕ್ಟೋಬರ್ 2024, 4:41 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ಲಾಸ್‌ ಏಂಜಲೀಸ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚುನಾವಣಾ ರ‍್ಯಾಲಿ ಆಯೋಜನೆಗೊಂಡಿದ್ದ ಸ್ಥಳದಲ್ಲಿ, ಶಸ್ತ್ರಾಸ್ತ್ರ ಮತ್ತು ನಕಲಿ ಪಾಸ್‌ಪೋರ್ಟ್‌ಗಳನ್ನು ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಲಾಗಿದೆ.

ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದಲ್ಲಿ ಟ್ರಂಪ್‌ ಅವರ ಚುನಾವಣಾ ರ‍್ಯಾಲಿ ಆಯೋಜನೆಗೊಂಡಿತ್ತು. ಈ ವೇಳೆ ನೋಂದಣಿಯಾಗದೆ ಇರುವ ವಾಹನವೊಂದನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾ‌ಗ ಶಸ್ತ್ರಾಸ್ತ್ರಗಳು, ನಕಲಿ ಪಾಸ್‌ಪೋರ್ಟ್‌ಗಳು ಮತ್ತು ಬೇರೆ ಬೇರೆ ಹೆಸರಿನಲ್ಲಿ ಇರುವ ವಾಹನ ಪರವಾನಗಿಗಳು ಪತ್ತೆಯಾಗಿವೆ.

ADVERTISEMENT

‘ಶಂಕಿತನು ಲಾಸ್‌ ವೇಗಾಸ್‌ ನಿವಾಸಿಯಾಗಿದ್ದು, ಪತ್ರಕರ್ತ ಎಂದು ಹೇಳಿಕೊಂಡಿದ್ದ. ಆದರೆ ಆತನ ಬಳಿ ಸೂಕ್ತ ದಾಖಲೆಗಳು ಇರಲಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಟ್ರಂಪ್ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ಮೊದಲೇ ಶಂಕಿತನನ್ನು ಬಂಧಿಸಲಾಗಿತ್ತು. ಟ್ರಂಪ್ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಆತನನ್ನು 2025ರ ಜನವರಿ 2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

‘ಘಟನೆಯ ಬಗ್ಗೆ ತನಿಖೆ ಮುಂದುವರಿದಿದ್ದು, ಬೇರೆ ಯಾರನ್ನೂ ಬಂಧಿಸಿಲ್ಲ’ ಎಂದು ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.

ಈ ಹಿಂದೆ ಎರಡು ಬಾರಿ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿರುವುದರಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕಳೆದ ಜುಲೈ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಟ್ರಂಪ್ ಅವರ ಹತ್ಯೆ ಯತ್ನ ನಡೆದಿತ್ತು. ಅದರಲ್ಲೂ ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದ ಹತ್ಯೆ ಯತ್ನದಲ್ಲಿ ಟ್ರಂಪ್ ಅವರು ಬಲ ಕಿವಿಗೆ ಗಾಯವಾಗಿ ಸ್ವಲ್ಪದರಲ್ಲೇ ಉಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.