ADVERTISEMENT

ನಿಜ್ಜರ್‌ ಹತ್ಯೆ: ಅಮೆರಿಕದ ಕ್ರಮ ಕೆನಡಾ ಆರೋಪಕ್ಕೆ ಪುಷ್ಟಿ ನೀಡುತ್ತದೆ- ಟ್ರೂಡೊ

ಪಿಟಿಐ
Published 30 ನವೆಂಬರ್ 2023, 16:14 IST
Last Updated 30 ನವೆಂಬರ್ 2023, 16:14 IST
<div class="paragraphs"><p>ಜಸ್ಟಿನ್ ಟ್ರೂಡೊ</p></div>

ಜಸ್ಟಿನ್ ಟ್ರೂಡೊ

   

ಒಟ್ಟಾವ(ಕೆನಡಾ): ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಆರೋಪಿಸುತ್ತಲೇ ಬಂದಿದೆ. ಈಗ, ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಹತ್ಯೆಗೆ ನಡೆದಿದ್ದ ಯತ್ನದಲ್ಲಿ ಭಾರತೀಯನ ವಿರುದ್ಧ ಅಮೆರಿಕ ಆರೋಪ ಹೊರಿಸಿದೆ. ಇದು, ಕೆನಡಾದ ಆರೋಪಗಳನ್ನು ಪುಷ್ಟೀಕರಿಸುತ್ತದೆ ಎಂದು ಪ್ರಧಾನಿ ಜಸ್ಟಿನ್‌ ಟ್ರೂಡೊ ಹೇಳಿದ್ದಾರೆ.

ಪನ್ನೂ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್‌ ಗುಪ್ತಾ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿರುವ ಬೆನ್ನಲ್ಲೇ, ಈ ಹೇಳಿಕೆ ನೀಡಿರುವ ಟ್ರೂಡೊ, ಈ ವಿಷಯವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ADVERTISEMENT

ಆಗಸ್ಟ್‌ನಲ್ಲಿ ನಿಜ್ಜರ್‌ ಹತ್ಯೆ ನಡೆದಿತ್ತು. ಈ ಹತ್ಯೆಯಲ್ಲಿ ಭಾರತದ ಕೈವಾಡ ಇರುವ ಕುರಿತ ಆರೋಪಗಳಿಗೆ ಸಂಬಂಧಿಸಿ ಕೆನಡಾ ಅಧಿಕಾರಿಗಳು ಅಂದಿನಿಂದಲೂ ಅಮೆರಿಕದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದೂ ಟ್ರೂಡೊ ಹೇಳಿದ್ದಾರೆ.

‘ಯಾರೂ ಲಘುವಾಗಿ ತೆಗೆದುಕೊಳ್ಳುವಂತಹ ವಿಷಯ ಇದಲ್ಲ. ಕೆನಡಾ ಪ್ರಜೆಗಳ ಸುರಕ್ಷತೆ ನಮ್ಮ ಜವಾಬ್ದಾರಿ. ಈ ಹೊಣೆಗಾರಿಕೆ ನಿಭಾಯಿಸುವುದನ್ನು ನಾವು ಮುಂದುವರಿಸುತ್ತೇವೆ’ ಎಂದಿದ್ದಾರೆ.

‘ಕೆನಡಾ ಮಾತ್ರ ಇಂತಹ ಬೆದರಿಕೆಗಳನ್ನು ಎದುರಿಸುತ್ತಿಲ್ಲ ಎಂಬುದನ್ನು ಅಮೆರಿಕದ ಆಪಾದನೆ ದೃಢಪಡಿಸುತ್ತದೆ’ ಎಂದು ಕೆನಡಾ ಗೃಹ ಸಚಿವ ಡೊಮಿನಿಕ್ ಲಿಬ್ಲಾಂಕ್ ಹೇಳಿದ್ದಾರೆ.

ಪನ್ನೂ ಹತ್ಯೆ ಯತ್ನ ವಿಫಲಗೊಳಿಸಿದ್ದರ ಕುರಿತು ಅಮೆರಿಕದಲ್ಲಿ ಆಗಿರುವ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೊಲಿ, ‘ಅಮೆರಿಕದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ತನ್ನ ನೆಲದಲ್ಲಿ ನಡೆದಿರುವ ಕೆನಡಾ ಪ್ರಜೆಯ ಹತ್ಯೆಗೆ ಭಾರತದ ಏಜೆಂಟರ ನಂಟಿದೆ ಎಂಬ ಆರೋಪಕ್ಕೆ ನಮ್ಮ ಸರ್ಕಾರ ಈಗಲೂ ಬದ್ಧ’ ಎಂದರು.

ಬಾಗ್ಚಿ ತಿರುಗೇಟು

ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳು ಸಕ್ರಿಯವಾಗಿವೆ. ಇದು ಉಭಯ ದೇಶಗಳ ನಡುವಿನ ಮುಖ್ಯ ವಿಷಯ ಎಂದು ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

‘ಭಾರತ ವಿರೋಧಿ ತೀವ್ರಗಾಮಿಗಳಿಗೆ ಹಾಗೂ ಹಿಂಸಾಚಾರಕ್ಕೆ ಕೆನಡಾ ನಿರಂತರವಾಗಿ ಆಶ್ರಯ ನೀಡುತ್ತಾ ಬಂದಿದೆ ಎಂಬುದೇ ಈ ಸಮಸ್ಯೆಯ ಕೇಂದ್ರ ಬಿಂದು. ಕೆನಡಾದಲ್ಲಿರುವ ನಮ್ಮ ರಾಜತಾಂತ್ರಿಕರು ಸಂಕಷ್ಟ ಎದುರಿಸಿದ್ದಾರೆ’ ಎಂದು ಹೇಳಿದ್ದಾರೆ.

2020ರಲ್ಲಿ ನಿಜ್ಜರ್‌ನನ್ನು ಉಗ್ರ ಎಂದು ಭಾರತ ಘೋಷಿಸಿತ್ತು. ಆತನ ಹತ್ಯೆಯಲ್ಲಿ ತನ್ನ  ಕೈವಾಡ ಇದೆ ಎಂಬ ಕೆನಡಾ ಆರೋಪಗಳನ್ನು ತಳ್ಳಿ ಹಾಕಿದ್ದ ಭಾರತ, ‘ಇವು ಅಸಂಬದ್ಧ ಹಾಗೂ ಪ್ರಚೋದಿತ ಆರೋಪಗಳು’ ಎಂದು ತಿರುಗೇಟು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.