ಹ್ಯೂಸ್ಟನ್: ‘ಟೈಮ್’ ನಿಯತಕಾಲಿಕೆ ಗುರುತಿಸಿರುವ 25 ಪ್ರಭಾವಿ ಹದಿಹರೆಯದವರಲ್ಲಿ ಭಾರತದ ಮೂವರು ವಿದ್ಯಾರ್ಥಿಗಳು ಇದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿರುವವರನ್ನು ಗುರುತಿಸಿ ಈ ಪಟ್ಟಿ ಮಾಡಲಾಗಿದೆ. ಅಮೆರಿಕದಲ್ಲಿರುವ ಭಾರತ ಮೂಲದ ವಿದ್ಯಾರ್ಥಿಗಳಾದ ಕಾವ್ಯಾ ಕೊಪ್ಪರಪು, ರಿಷಬ್ ಜೈನ್ ಮತ್ತು ಬ್ರಿಟನ್‌ನಲ್ಲಿರುವ ಭಾರತ ಮೂಲದ ಅಮಿಕಾ ಜಾರ್ಜ್ ಈ ಪಟ್ಟಿಯಲ್ಲಿ ಇದ್ದಾರೆ.
ಈ ಮೂವರು ಅದ್ಭುತ ಸಾಧನೆ ಮೂಲಕ ಜಗತ್ತಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ‘ಟೈಮ್’ ಬಣ್ಣಿಸಿದೆ.
ಎಂಟನೇ ತರಗತಿಯಲ್ಲಿರುವ ರಿಷಬ್, ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ನೆರವಾಗುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಕಾವ್ಯಾ ಕೊಪ್ಪರಪು, ಮಿದುಳು ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳ ಮಿದುಳಿನ ಕೋಶಗಳನ್ನು ಸ್ಕ್ಯಾನ್ ಮಾಡಬಲ್ಲಂತಹ ಕಂಪ್ಯೂಟರ್ ಅಭಿವೃದ್ಧಿಪಡಿಸುವ ಮೂಲಕ ಚಿಕಿತ್ಸೆಗೆ ನೆರವಾಗಿದ್ದಾರೆ. ಕಳೆದ 30 ವರ್ಷಗಳಿಂದ ‘ಗ್ಲಿಯೊಬ್ಲಾಸ್ಟೊಮಾ’ ಎನ್ನುವ ಮಿದುಳು ಕಾನ್ಸರ್‌ಗೆ ಸಮರ್ಪಕವಾದ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವುದನ್ನು ತಿಳಿದುಕೊಂಡು ಈ ವ್ಯವಸ್ಥೆಯನ್ನು ಕಾವ್ಯಾ ರೂಪಿಸಿದ್ದಾರೆ.
ಋತುಚಕ್ರದ ಸಂದರ್ಭದಲ್ಲಿ ಬಳಸುವ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗದ ಮಹಿಳೆಯರಿಗೆ ಮತ್ತು ಬಾಲಕಿಯರಿಗೆ ಹಣಕಾಸಿನ ನೆರವು ಒದಗಿಸಲು ನೀತಿ ರೂಪಿಸುವಂತೆ ಸರ್ಕಾರದ ಗಮನ ಸೆಳೆಯುವಲ್ಲಿ ಅಮಿಕಾ ಜಾರ್ಜ್ ಶ್ರಮಿಸಿದ್ದಾರೆ.
‘ಬಡತನದ ಋತುಚಕ್ರ’ ಎಂದು ಕರೆದಿದ್ದ ಅಮಿಕಾ, ಇದಕ್ಕಾಗಿ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದ ಅಂಗವಾಗಿ ತಮ್ಮ ಮನವಿಗೆ 2 ಲಕ್ಷ ಮಂದಿ ಸಹಿ ಸಂಗ್ರಹಿಸಿ ಬೆಂಬಲ ಪಡೆದಿದ್ದರು. ಈ ಅಭಿಯಾನದಿಂದ ಸರ್ಕಾರದ ಬೆಂಬಲ ಪಡೆಯುವಲ್ಲಿಯೂ ಯಶಸ್ವಿಯಾದರು. ಬ್ರಿಟನ್ ಸರ್ಕಾರ ಪ್ರಥಮ ಬಾರಿ ಋತುಚಕ್ರಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಖರೀದಿಸಲು ಹಣ ಮೀಸಲಿಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.