ADVERTISEMENT

ನಿಜ್ಜರ್‌ ಹತ್ಯೆ: ಭಾರತ ಮೂಲದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

​ಪ್ರಜಾವಾಣಿ ವಾರ್ತೆ
Published 8 ಮೇ 2024, 15:33 IST
Last Updated 8 ಮೇ 2024, 15:33 IST
<div class="paragraphs"><p>nijjar</p></div>

nijjar

   

ಒಟ್ಟಾವ: ಖಾಲಿಸ್ತಾನ ಪರ ಹೋರಾಟಗಾರ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಆರೋಪಿಗಳಾದ ಮೂವರು ಭಾರತೀಯರನ್ನು ಕೆನಡಾದ ನ್ಯಾಯಾಲಯವೊಂದಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ಹಾಜರುಪಡಿಸಲಾಯಿತು.

ಎಡ್ಮಂಟನ್‌ ನಿವಾಸಿಗಳಾದ ಕರಣ್‌ ಬ್ರಾರ್‌ (22), ಕಮಲ್‌ಪ್ರೀತ್‌ ಸಿಂಗ್ (22) ಮತ್ತು ಕರಣ್‌ಪ್ರೀತ್‌ ಸಿಂಗ್‌ (28) ಅವರನ್ನು ಕಳೆದ ಶುಕ್ರವಾರ ಬಂಧಿಸಲಾಗಿತ್ತು ಮತ್ತು ಅವರ ವಿರುದ್ಧ ಕೊಲೆ ಮತ್ತು ಕೊಲೆಗೆ ಸಂಚು ಆರೋಪ ಹೊರಿಸಲಾಗಿತ್ತು.

ADVERTISEMENT

ನಾರ್ತ್‌ ಫಾಸ್ಟರ್‌ ಪ್ರಿ ಟ್ರಯಲ್‌ ಸೆಂಟರ್‌ ಕಾರಾಗೃಹದಿಂದಲೇ ಅವರನ್ನು ಪ್ರತ್ಯೇಕವಾಗಿ ಸರ್ರೆ ಪ್ರಾವಿನ್‌ಶಿಯಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ಬಳಿಕ ವಕೀಲರ ಜೊತೆ ಸಮಾಲೋಚನೆ ನಡೆಸಲು ಅವಕಾಶ ನೀಡಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ನಿಗದಿಪಡಿಸಿತು ಎಂದು ಕೆನಡಾದ ‘ವ್ಯಾಂಕೊವರ್‌ ಸನ್‌’ ಸುದ್ದಿಪತ್ರಿಕೆ ವರದಿ ಮಾಡಿದೆ. 

ಕೆನಡಾ ನಿವಾಸಿ ಹರದೀಪ್‌ ಸಿಂಗ್‌ ನಿಜ್ಜರ್‌ನನ್ನು ಕಳೆದ ವರ್ಷ ಹತ್ಯೆಗೈಯಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಕೆನಡಾ ನಡುವಣ ದ್ವಿಪಕ್ಷೀಯ ಸಂಬಂಧ ಹದಗೆಟ್ಟೆತ್ತು.

ಕೆಂಪುಪಟ್ಟಿ ದಾಟುತ್ತಿದ್ದೀರಿ: ಸಿಖ್‌ ಸಂಘಟನೆಗಳಿಗೆ ಎಚ್ಚರಿಕೆ

ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಮಧ್ಯೆಯೇ ಕೆನಡಾದ ಭಾರತೀಯ ರಾಯಭಾರ ಕಚೇರಿಯು ಅಲ್ಲಿಯ ಸಿಖ್‌ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ‘ದೊಡ್ಡ ಕೆಂಪುಪಟ್ಟಿಯನ್ನು ದಾಟುತ್ತಿದ್ದೀರಿ’ ಎಂದು ಎಚ್ಚರಿಕೆ ನೀಡಿದೆ.  ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ ಬೆನ್ನಲ್ಲೇ ಕೆನಡಾದ ಭಾರತೀಯ ರಾಯಭಾರಿ ಸಂಜಯ್‌ ಕುಮಾರ್‌ ವರ್ಮ ಅವರು ‘ಭಾರತದ ಭವಿಷ್ಯವನ್ನು ಭಾರತೀಯರೇ ನಿರ್ಧರಿಸುತ್ತಾರೆ. ವಿದೇಶಿಯರು ನಿರ್ಧರಿಸಬೇಕಿಲ್ಲ’ ಎಂದು ಹೇಳಿದ್ದಾರೆ. ತಮ್ಮ ತಾಯ್ನೆಲವನ್ನು ಒಡೆಯಲು ಕರೆ ನೀಡುತ್ತಿರುವ ಕೆನಡಾದಲ್ಲಿಯ ಸಿಖ್‌ ಸಂಘಟನೆಗಳು ಕೆಂಪು ಗೆರೆಯನ್ನು ದಾಟುತ್ತಿವೆ. ಇದನ್ನು ಭಾರತವು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ನೋಡುತ್ತದೆ ಎಂದು ವರ್ಮ ಹೇಳಿದ್ದಾರೆ. ಇದೇವೇಳೆ ‘ಕೆನಡಾ ಮತ್ತು ಭಾರತ ನಡುವಣ ಸಂಬಂಧವು ಹಲವು ಸಮಸ್ಯೆಗಳ ನಡುವೆಯೂ ಸಕಾರಾತ್ಮಕವಾಗಿಯೇ ಇದೆ. ನಾವು ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಾವು ಕುಳಿತು ಚರ್ಚಿಸಲೂ ತಯಾರಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.