ಮಿಚಿಗನ್: ಅಮೆರಿಕದ ಈಸ್ಟ್ ಲ್ಯಾನ್ಸಿಂಗ್‌ನ ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ಕ್ಯಾಂಪಸ್‌ನಲ್ಲಿ ಎರಡು ಕಡೆ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿ ಬಂದ ಗಂಟೆ ಬಳಿಕ ಮೂವರ ಸಾವಿನ ಸುದ್ದಿಯನ್ನು ಪೊಲೀಸರು ಪ್ರಕಟಿಸಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ಕ್ರಿಸ್ ರೋಜ್‌ಮನ್ ತಿಳಿಸಿದ್ದಾರೆ.
ಬಂದೂಕುಧಾರಿಯೊಬ್ಬ ದಾಳಿ ನಡೆಸುತ್ತಿರುವ ಬಗ್ಗೆ ಕ್ಯಾಂಪಸ್‌ನಲ್ಲಿರುವ ಜನರಿಗೆ ರಾತ್ರಿ 8.30ರ ಸುಮಾರಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ ಪೊಲೀಸರು, ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸಿದ್ದರು. ನೂರಾರು ಪೊಲೀಸ್ ಸಿಬ್ಬಂದಿ ಕ್ಯಾಂಪಸ್‌ನ ಸಮೀಪವಿರುವ ರಸ್ತೆಗಳನ್ನು ಸುತ್ತಿವರೆದರು.
ಕಲೆ ಮತ್ತು ವಿಜ್ಞಾನ ವಿಭಾಗಗಳಿರುವ ಬರ್ಕಿ ಹಾಲ್‌ನಲ್ಲಿ ಮೊದಲ ಗುಂಡಿನ ದಾಳಿ ನಡೆದಿದೆ ಎಂದು ರೋಜ್‌ಮನ್ ಹೇಳಿದ್ದಾರೆ. ನಂತರ ಎರಡನೇ ಗುಂಡಿನ ದಾಳಿ ಎಂಎಸ್‌ಯು ವಿದ್ಯಾರ್ಥಿ ಒಕ್ಕೂಟ ಪ್ರದೇಶದಲ್ಲಿ ನಡೆದಿದೆ. ಕಟ್ಟಡದ ಉತ್ತರ ಭಾಗದಲ್ಲಿ ಕೊನೆಯದಾಗಿ ಬಂದೂಕುಧಾರಿ ಕಾಣಿಸಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.