ವಾಷಿಂಗ್ಟನ್:ಭಾರತ ಮೂಲದ ಗೀತಾಂಜಲಿ ರಾವ್ (15 ವರ್ಷ) ಅವರಿಗೆ ಟೈಮ್ ನಿಯತಕಾಲಿಕೆಯ ‘ಕಿಡ್ ಆಫ್ ದಿ ಇಯರ್’ ಗೌರವ ಸಂದಿದೆ.
ಗೀತಾಂಜಲಿ ಅವರು ಕುಡಿಯುವ ನೀರಿನಿಂದ ಸೀಸವನ್ನು ಶೋಧಿಸಬಲ್ಲ ಮತ್ತು ಸೈಬರ್ ಬೆದರಿಕೆ ಕೃತ್ಯಗಳನ್ನು ಪತ್ತೆ ಮಾಡುವ (ಸೈಬರ್ ಬುಲ್ಲಿಯಿಂಗ್) ಸಾಧನಗಳನ್ನು ಅಭಿವೃದ್ಧಿಪಡಿಸಿದ್ದಾರೆ.
‘ಕಿಡ್ ಆಫ್ ದಿ ಇಯರ್’ಗೆ 5,000ಕ್ಕೂ ಹೆಚ್ಚು ಮಂದಿಯನ್ನು ನಾಮನಿರ್ದೇಶನ ಮಾಡಲಾಗಿತ್ತು.
ನಾನಿದನ್ನು ಮಾಡಬಹುದು ಎಂದಾದರೆ ನೀವೂ ಮಾಡಬಹುದು. ಯಾರು ಬೇಕಾದರೂ ಮಾಡಬಹುದು. ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಸಾಧನವನ್ನು ಅಭಿವೃದ್ಧಿಪಡಿಸುವುದಷ್ಟೇ ನನ್ನ ಗುರಿಯಾಗಿರಲಿಲ್ಲ. ಇಂತಹ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇತರರನ್ನು ಪ್ರೇರೇಪಿಸುವುದೂ ನನ್ನ ಉದ್ದೇಶವಾಗಿತ್ತು ಎಂದು ಖ್ಯಾತ ನಟಿ ಏಂಜಲಿನಾ ಜೋಲಿ ನಡೆಸಿದ ಸಂದರ್ಶನದಲ್ಲಿ ಗೀತಾಂಜಲಿ ರಾವ್ ಹೇಳಿರುವುದಾಗಿ‘ಬಿಬಿಸಿ ಸುದ್ದಿತಾಣ’ವರದಿ ಮಾಡಿದೆ.
‘ಈ ಹಿಂದೆ ಇರದಂತಹ ಹಾಗೂ ಪರಿಹರಿಸಬೇಕಿರುವ ಅನೇಕ ಸಮಸ್ಯೆಗಳನ್ನು ವಿಶ್ವದಲ್ಲಿ ನಮ್ಮ ತಲೆಮಾರು ಎದುರಿಸುತ್ತಿದೆ. ಜತೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನೂ ಎದುರಿಸುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.
‘ಜಾಗತಿಕವಾಗಿ ಹರಡುತ್ತಿರುವ ಸಾಂಕ್ರಾಮಿಕದ ಮಧ್ಯೆಯೇ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಾವು ಎದುರಿಸುತ್ತಿದ್ದೇವೆ. ನಾವು ಸೃಷ್ಟಿಸದ ಸಮಸ್ಯೆಗಳೂ ಇವೆ. ಹವಾಮಾನ ಬದಲಾವಣೆ ಮತ್ತು ಸೈಬರ್ ಬೆದರಿಕೆಯಂತಹ ಸಮಸ್ಯೆಗಳನ್ನು ನಾವು ಪರಿಹರಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.
ಗೀತಾಂಜಲಿ ಅವರು ಈ ಹಿಂದೆ ‘ಅಮೆರಿಕದ ಉನ್ನತ ಯುವ ವಿಜ್ಞಾನಿ’ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ನೀರಿನಿಂದ ಸೀಸವನ್ನು ಶೋಧಿಸಬಲ್ಲ ಕಡಿಮೆ ವೆಚ್ಚದ ಸಾಧನ ಅಭಿವೃದ್ಧಿಪಡಿಸಿದ್ದಕ್ಕಾಗಿ ಅವರಿಗೆ ಈ ಗೌರವ ಸಂದಿತ್ತು.
ಟೈಮ್ ನಿಯತಕಾಲಿಕೆಯು 1927ರಿಂದ ‘ಮ್ಯಾನ್ ಆಫ್ ದಿ ಇಯರ್’ ಪ್ರಶಸ್ತಿಯನ್ನೂ ನೀಡುತ್ತಿದ್ದು, ನಂತರ ಅದು ‘ಪರ್ಸನ್ ಆಫ್ ದಿ ಇಯರ್’ ಎಂದು ಮರುನಾಮಕರಣಗೊಂಡಿದೆ. ಈ ಪ್ರಶಸ್ತಿಯು ಮುಂದಿನ ವಾರ ಘೋಷಣೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.