ಪ್ಯಾರಿಸ್: ಕಳೆದೊಂದು ವರ್ಷದಿಂದ ಸುಡಾನ್‌ನಲ್ಲಿ ನಡೆದ ಆಂತರಿಕ ಯುದ್ಧವು ದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ ಮತ್ತು ಜನರನ್ನು ಕ್ಷಾಮದ ಅಂಚಿಗೆ ತಳ್ಳಿದೆ. ತೀವ್ರ ಸಂಕಷ್ಟಕ್ಕೆ ಈಡಾಗಿರುವ ರಾಷ್ಟ್ರಕ್ಕೆ ಮಾನವೀಯ ಬೆಂಬಲ ನೀಡುವ ಕುರಿತು ಉನ್ನತ ರಾಜತಾಂತ್ರಿಕರು ಹಾಗೂ ಸಹಾಯ ಗುಂಪಿನವರು ಭಾನುವಾರ ಪ್ಯಾರಿಸ್‌ನಲ್ಲಿ ಸಭೆ ನಡೆಸಿದರು.
ಸುಡಾನ್‌ನಲ್ಲಿ 2.40 ಕೋಟಿ ಜನರಿಗೆ ಆಹಾರ, ಆರೋಗ್ಯ ರಕ್ಷಣೆ ಮತ್ತು ಇತರ ನೆರವು ನೀಡಲು ವಿಶ್ವಸಂಸ್ಥೆಯ ಮಾನವೀಯ ಅಭಿಯಾನಕ್ಕೆ ಈ ವರ್ಷ ಸುಮಾರು ₹22,518 ಕೋಟಿ ಅಗತ್ಯವಿದೆ. ಆದರೆ, ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಹಯೋಗ ಕಚೇರಿ ‘ಒಸಿಎಚ್‌ಎ’ ಪ್ರಕಾರ ಈವರೆಗೆ ಕೇವಲ ₹1,209 ಕೋಟಿ ಅಥವಾ ಅಗತ್ಯದ ಶೇ 5ರಷ್ಟು ಮಾತ್ರ ಸಂಗ್ರಹವಾಗಿದೆ.
ಈ ನಡುವೆ ಸುಡಾನ್ ಇನ್ನೂ ದೊಡ್ಡ ಪ್ರಮಾಣದ ಹಸಿವಿನ ವಿಪತ್ತಿಗೆ ಗುರಿಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಾಮೂಹಿಕ ಸಾವು ಸಂಭವಿಸಬಹುದು. ಆಹಾರ ಉತ್ಪಾದನೆ ಮತ್ತು ವಿತರಣೆ ಜಾಲಗಳು ಮುರಿದು ಬಿದ್ದಿವೆ. ಸಹಾಯ ಗುಂಪುಗಳ ಪೀಡಿತ ಪ್ರದೇಶಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಮಾನವೀಯ ಪರಿಹಾರ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಅಲ್ಲದೇ ಕನಿಷ್ಠ ಶೇ 37ರಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಸುಮಾರು 2.30 ಲಕ್ಷ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು ಅಪೌಷ್ಟಿಕತೆಯಿಂದ ಸಾವೀಗೀಡಾಗಬಹುದು. ಮಕ್ಕಳನ್ನು ರಕ್ಷಿಸಿ ಎಂದು ‘ಒಸಿಎಚ್‌ಎ’ ಎಚ್ಚರಿಸಿದೆ.
ಖಾರ್ತೂಮ್ ಸೇರಿದಂತೆ ಹಲವೆಡೆ ಅತ್ಯಾಚಾರ ಮತ್ತು ಕೊಲೆಗಳಂತಹ ದೌರ್ಜನ್ಯಗಳು ವ್ಯಾಪಕವಾಗುತ್ತಿವೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಪ‍್ರಾರಂಭವಾದ ಉದ್ವಿಗ್ನತೆಯು ದೇಶದೆಲ್ಲೆಡೆ ಹರಡಿ ಸುಡಾನ್ ತೀವ್ರ ಸಂಘರ್ಷದಲ್ಲಿ ಮುಳುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.