ADVERTISEMENT

ಜಾಧವ್ ಪರ ವಕೀಲರ ನೇಮಕ: ನಿಲುವು ತಿಳಿಸಲು ಮುಂದಾದ ಭಾರತ

ಪಿಟಿಐ
Published 2 ಡಿಸೆಂಬರ್ 2020, 9:19 IST
Last Updated 2 ಡಿಸೆಂಬರ್ 2020, 9:19 IST
ಕುಲಭೂಷಣ್ ಜಾಧವ್
ಕುಲಭೂಷಣ್ ಜಾಧವ್   

ಇಸ್ಲಾಮಾಬಾದ್‌: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್‌ ಅವರ ಪರ ವಕೀಲರನ್ನು ನೇಮಿಸುವ ಕುರಿತ ಭಾರತ ನಿಲುವನ್ನು ವಿವರಿಸಲು ಉಪ ಹೈಕಮಿಷನರ್ ಗೌರವ್ ಅಹ್ಲುವಾಲಿಯಾ ಬಯಸಿರುವುದಾಗಿ ಪಾಕ್‌ನಲ್ಲಿರುವ ಭಾರತೀಯ ಹೈ ಕಮಿಷನ್‌ ಇಸ್ಲಾಮಾಬಾದ್‌ ಹೈ ಕೋರ್ಟ್‌ಗೆ ತಿಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಅಥರ್ ಮಿನಾಲ್ಹಾ, ನ್ಯಾಯಮೂರ್ತಿಗಳಾದ ಅಮೇರ್ ಫಾರೂಖ್ ಮತ್ತು ಮಿಯಾಂಗುಲ್‌ ಹಸನ್‌ ಔರಂಗಜೇಬ್‌ ಅವರನ್ನೊಳಗೊಂಡ ನ್ಯಾಯ ಪೀಠದ ಎದುರು ಹಾಜರಾದ ಭಾರತೀಯ ಹೈಕಮಿಷನ್‌ ಪರ ನ್ಯಾಯವಾದಿ ಶಹನವಾಜ್ ನೂನ್ ಮಂಗಳವಾರ ಜಾಧವ್ ಪರ ವಕೀಲರ ನೇಮಕಕ್ಕೆ ಸಂಬಂಧಿಸಿದ ವಿಷಯವನ್ನು ಚರ್ಚಿಸಲಾಗಿದೆ ಎಂದು ಹೇಳಿದರು. ಈ ಸಂಬಂಧ ಭಾರತದ ನಿಲುವನ್ನು ಉಪ ಹೈಕಮಿಷನರ್‌ ಅಹ್ಲುವಾಲಿಯಾ ಅವರು ನ್ಯಾಯಾಲಯದ ಎದುರು ವಿವರಿಸಬಹುದು ಎಂದು ‘ಡಾನ್ ನ್ಯೂಸ್‘ ವರದಿ ಮಾಡಿದೆ.

ನ್ಯಾಯಮೂರ್ತಿ ಮಿನಲ್ಹಾ ಅವರು, ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸುವ ಸಲುವಾಗಿ, ‘ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಐಎಚ್‌ಸಿ ಭಾರತ ಸರ್ಕಾರದಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದೆ’ ಎಂದು ಹೇಳಿದರು.

ADVERTISEMENT

‘ಅಂತರರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸುವ ವೇಳೆ, ಇಸ್ಲಾಮಾಬಾದ್ ಹೈ ಕೋರ್ಟ್‌, ಭಾರತದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತದೆ. ನ್ಯಾಯಯುತ ವಿಚಾರಣೆಯನ್ನು ಖಚಿತಗೊಳಿಸುವುದು ನಮ್ಮ ಕರ್ತವ್ಯ‘ ಎಂದು ನ್ಯಾಯಮೂರ್ತಿ ಮಿನಿಲ್ಯಾ ಹೇಳಿದ್ದಾರೆ. ‘ಒಂದು ವೇಳೆ ರಾಜತಾಂತ್ರಿಕರು ನ್ಯಾಯಾಲಯದ ಎದುರು ಹಾಜರಾಗಲು ಬಯಸಿದರೆ, ಅದನ್ನು ಸ್ವಾಗತಿಸುತ್ತೇವೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.