ADVERTISEMENT

ನಾಜಿ ಯೋಧನಿಗೆ ಗೌರವ: ಕ್ಷಮೆ ಕೋರಿದ ಟ್ರುಡೊ

ಪಿಟಿಐ
Published 28 ಸೆಪ್ಟೆಂಬರ್ 2023, 12:12 IST
Last Updated 28 ಸೆಪ್ಟೆಂಬರ್ 2023, 12:12 IST
ಜಸ್ಟಿನ್‌ ಟ್ರುಡೊ
ಜಸ್ಟಿನ್‌ ಟ್ರುಡೊ   

ಒಟ್ಟಾವ : ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ನಾಜಿ ಯೋಧ ಯರೊಸ್ಲಾವ್‌ ಹುಂಕಾ ಅವರನ್ನು ಕೆನಡಾ ಸಂಸತ್ತಿನಲ್ಲಿ ಗೌರವಿಸಿದ್ದಕ್ಕಾಗಿ ಪ್ರಧಾನಿ ಜಸ್ಟಿನ್‌ ಟ್ರುಡೊ ಕ್ಷಮೆ ಕೋರಿದ್ದಾರೆ. 

ನಾಜಿ ಯೋಧನನ್ನು ಗೌರವಿಸಿದ್ದು ವಿಶ್ವದ ಗಮನ ಸೆಳೆದು ಖಂಡನೆಗೆ ಒಳಗಾಗಿತ್ತು. ವಿರೋಧ ಪಕ್ಷಗಳೂ ಪ್ರಧಾನಿ ಅವರು ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದವು.

ಯೋಧನನ್ನು ಆಹ್ವಾನಿಸಿದ ಹೊಣೆ ಹೊತ್ತು ಸ್ಪೀಕರ್‌ ಆ್ಯಂಥೋನಿ ರೊಟಾ ಅವರು ಕೂಡ ಈಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೆ. 22ರಂದು ಶುಕ್ರವಾರ ಸಂಸತ್ತನ್ನು ಉದ್ದೇಶಿಸಿ ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್ಸ್ಕಿ ಭಾಷಣ ಮಾಡಿದ್ದರು. ಆ ಬಳಿಕ ಹುಂಕಾ ಅವರನ್ನು ಸ್ಪೀಕರ್‌ ಆ್ಯಂಥೋನಿ ಗೌರವಿಸಿದ್ದರು.

ADVERTISEMENT

‘ಇದು ನಾವು ಮಾಡಿದ ತಪ್ಪು. ಇದರಿಂದ ಸಂಸತ್ತು ಮತ್ತು ಕೆನಡಾ ಭಾರಿ ಮುಜಗರಕ್ಕೆ ಒಳಗಾಯಿತು. ಸಂದರ್ಭದ ಅರಿವೇ ಇಲ್ಲದೆ ನಾವು ಎದ್ದು ನಿಂತು ಕರತಾಡನ ಮಾಡಿದ್ದೆವು. ಅಂದು ಸದನದಲ್ಲಿದ್ದ ಎಲ್ಲರೂ ಇದಕ್ಕಾಗಿ ವಿಷಾದಿಸುತ್ತೇವೆ’ ಎಂದು ಪ್ರಧಾನಿ ಅವರು  ‘ಹೌಸ್‌ ಆಫ್‌ ಕಾಮನ್ಸ್‌‘ (ಸಂಸತ್‌ನ ಕೆಳಮನೆ) ಪ್ರವೇಶಿಸುವ ಮೊದಲು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಬಳಿಕ ಸಂಸತ್ತಿನಲ್ಲಿ ಕೂಡ ಟ್ರುಡೊ ಇದನ್ನು ಪುನರುಚ್ಚರಿಸಿ ಕ್ಷಮೆ ಕೋರಿದರು.

’ನಾಜಿಗಳು ನಡೆಸಿದ ಯೆಹೂದಿಗಳ ಹತ್ಯಾಕಾಂಡದಲ್ಲಿ ಮಡಿದವರಿಗೆ ಮಾಡಿದ ಅವಮಾನ ಈ ಗೌರವ. ಯೆಹೂದಿಗಳಿಗೆ ಅಲ್ಲದೆ ನಾಜಿಗಳ ಹತ್ಯಾಕಾಂಡಕ್ಕೆ ಬಲಿಯಾದವರೆಲ್ಲರಿಗೆ ಇದರಿಂದ ಬಹಳ ನೋವಾಗಿದೆ’ ಎಂದು ಅವರು ಹೇಳಿರುವುದಾಗಿ ಸಿಟಿವಿ ನ್ಯೂಸ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.