ADVERTISEMENT

ನಿಜ್ಜರ್ ಹತ್ಯೆ: ಟ್ರುಡೊ ಮತ್ತೆ ಪ್ರಸ್ತಾಪ

ಪಿಟಿಐ
Published 11 ಏಪ್ರಿಲ್ 2024, 16:07 IST
Last Updated 11 ಏಪ್ರಿಲ್ 2024, 16:07 IST
ಜಸ್ಟಿನ್ ಟ್ರುಡೊ –ಎಎಫ್‌ಪಿ ಚಿತ್ರ
ಜಸ್ಟಿನ್ ಟ್ರುಡೊ –ಎಎಫ್‌ಪಿ ಚಿತ್ರ   

ಒಟ್ಟಾವಾ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆಯ ಬಗ್ಗೆ ಮತ್ತೆ ಪ್ರಸ್ತಾಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು, ಕೆನಡಾದ ಎಲ್ಲ ಪ್ರಜೆಗಳ ಹಕ್ಕುಗಳನ್ನು ರಕ್ಷಿಸಲು ತಮ್ಮ ಸರ್ಕಾರವು ಮುಂದಾಗುತ್ತದೆ ಎಂದು ಹೇಳಿದ್ದಾರೆ.

ಕೆನಡಾ ಚುನಾವಣಾ ಪ್ರಕ್ರಿಯೆಯಲ್ಲಿ ವಿದೇಶಿ ಕೈವಾಡ ಇತ್ತೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಮಿತಿಯ ಎದುರು ಹಾಜರಾದ ಟ್ರುಡೊ ಅವರು, ತಮ್ಮ ಹಿಂದಿನ ಸರ್ಕಾರವು ಭಾರತದ ಇಂದಿನ ಸರ್ಕಾರಕ್ಕೆ ಬಹಳ ಹಿತಕರವಾಗುವಂತೆ ನಡೆದುಕೊಳ್ಳುತ್ತಿತ್ತು ಎಂದು ಆರೋಪಿಸಿದ್ದಾರೆ.

ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಟ್ರುಡೊ ಅವರು ಸೆಪ್ಟೆಂಬರ್‌ ತಿಂಗಳಲ್ಲಿ ಆರೋಪಿಸಿದ ನಂತರದಲ್ಲಿ ಭಾರತದ ಮತ್ತು ಕೆನಡಾ ಸಂಬಂಧ ಹಳಸಿದೆ. ಕಳೆದ ವರ್ಷದ ಜೂನ್ 18ರಂದು ನಿಜ್ಜರ್ ಹತ್ಯೆ ಆಗಿತ್ತು.

ADVERTISEMENT

ಭಾರತವು 2020ರಲ್ಲಿ ನಿಜ್ಜರ್‌ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಟ್ರುಡೊ ಅವರು ಭಾರತವನ್ನು ಗುರಿಯಾಗಿಸಿಕೊಂಡು ಮಾಡಿರುವ ಆರೋಪವು ‘ಆಧಾರವಿಲ್ಲದ್ದು’ ಎಂದು ಕೇಂದ್ರ ಸರ್ಕಾರ ಹೇಳಿತ್ತು.

‘ಜಗತ್ತಿನ ಯಾವುದೇ ಭಾಗದಿಂದ ಕೆನಡಾಕ್ಕೆ ಬರುವ ಯಾವುದೇ ವ್ಯಕ್ತಿಗೆ ಕೆನಡಾ ಪ್ರಜೆಗೆ ಇರುವ ಎಲ್ಲ ಹಕ್ಕುಗಳು ಇರುತ್ತವೆ. ನಾನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ನಿಜ್ಜರ್ ಹತ್ಯೆಯ ಪ್ರಕರಣ ಸೇರಿದಂತೆ ಎಲ್ಲ ಸಂದರ್ಭಗಳಲ್ಲಿ ನಾವು ಕೆನಡಾ ಪ್ರಜೆಗಳ ಪರವಾಗಿ ನಿಂತ ನಿದರ್ಶನಗಳು, ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಕೆನಡಾದ ನಿಯಮಗಳು ಹಾಗೂ ಮೌಲ್ಯಗಳನ್ನು ರಕ್ಷಿಸಲು, ವಿದೇಶಿ ಹಸ್ತಕ್ಷೇಪದಿಂದ ಕೆನಡಾದ ಪ್ರಜೆಗಳನ್ನು ರಕ್ಷಿಸಲು ಸರ್ಕಾರವು ತಾನು ಮಾಡಬಹುದಾದ ಎಲ್ಲ ಕೆಲಸಗಳನ್ನು ಮಾಡಿಲ್ಲ ಎಂಬ ಮಾತುಗಳಿಗೆ ಆಧಾರವಿಲ್ಲ ಎಂದು ಟ್ರುಡೊ ಹೇಳಿದ್ದಾರೆ.

ತಮ್ಮ ಸರ್ಕಾರವು ಕೆನಡಾದಲ್ಲಿನ ಅಲ್ಪಸಂಖ್ಯಾತರ ರಕ್ಷಿಸುವ ಕೆಲಸ ಮಾಡಿದೆ. ಅವರು ತೊರೆದುಬಂದಿರುವ ದೇಶಗಳಿಗೆ ಕಿರಿಕಿರಿ ಉಂಟಾದರೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಹಿಂದೇಟು ಹಾಕಿಲ್ಲ ಎಂದು ಕೂಡ ಅವರು ಸಮಿತಿಗೆ ವಿವರಿಸಿದ್ದಾರೆ.

2019 ಹಾಗೂ 2021ರ ಚುನಾವಣೆಯ ಮೇಲೆ ಪ್ರಭಾವ ಬೀರಲು ಚೀನಾದಿಂದ ಕಾರ್ಯಾಚರಣೆ ನಡೆದಿತ್ತು ಎಂಬ ಆರೋಪಗಳ ಬಗ್ಗೆ ವಿಚಾರಣಾ ಸಮಿತಿಯು ಪರಿಶೀಲನೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.