ವಾಷಿಂಗ್ಟನ್: ‘ಪತ್ನಿಯಿಂದ ಬೇರೆಯಾಗಿ ವಾಸಿಸುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇರೆ ಯಾರನ್ನಾದರೂ ಜತೆ ಮಾಡುತ್ತೇನೆ’. ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವರ್ಷ ಮೋದಿ ಅವರ ಬಗ್ಗೆ ಆಡಿದ ತಮಾಷೆಯ ಮಾತು! ಭಾರತದ ಪ್ರಧಾನಿ ಪತ್ನಿಯೊಂದಿಗೆ ವಾಸಿಸುತ್ತಿಲ್ಲ ಎಂಬ ವಿಷಯವೂ ಟ್ರಂಪ್‌ಗೆ ತಿಳಿದಿರಲಿಲ್ಲವಂತೆ.
2017ರ ಜೂನ್‌ನಲ್ಲಿ ಶ್ವೇತಭವನಕ್ಕೆ ಮೋದಿ ಭೇಟಿ ನೀಡಿದ್ದರು. ಈ ಭೇಟಿಯ ಪೂರ್ವಭಾವಿಯಾಗಿ ರಾಷ್ಟ್ರೀಯ ಭದ್ರತಾ ಮಂಡಳಿ (ಎನ್‌ಎಸ್‌ಸಿ) ಅಧಿಕಾರಿಗಳ ಜತೆ ಟ್ರಂಪ್ ಸಭೆ ನಡೆಸಿದ್ದರು. ಆ ಸಂದರ್ಭ, ‘ಮೋದಿ ಅವರು ಜತೆಗೆ ಪತ್ನಿಯನ್ನೂ ಕರೆದುಕೊಂಡು ಬರುತ್ತಾರೆಯೇ’ ಎಂದು ಅಧಿಕಾರಿಗಳ ಬಳಿ ಟ್ರಂಪ್ ಪ್ರಶ್ನಿಸಿದ್ದರು. ‘ಮೋದಿ ಅವರು ಬಹಳಷ್ಟು ವರ್ಷಗಳ ಹಿಂದಿನಿಂದಲೇ ಪತ್ನಿಯಿಂದ ದೂರವಾಗಿ ವಾಸಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ಉತ್ತರಿಸಿದ್ದರು. ಆಗ ಟ್ರಂಪ್, ‘ಒಹ್, ಹಾಗಾದರೆ ಅವರಿಗೆ ಬೇರೆ ಯಾರನ್ನಾದರೂ ಜತೆ ಮಾಡುತ್ತೇನೆ’ ಎಂದು ಹೇಳಿದ್ದರು.
ಅದೇ ಸಂದರ್ಭದಲ್ಲಿ ಅವರು ನೇಪಾಳ ಮತ್ತು ಭೂತಾನ್ ಅನ್ನು ‘ನಿಪ್ಪಲ್’ ಹಾಗೂ ‘ಬಟನ್’ ಎಂದೂ ಉಚ್ಚರಿಸಿದ್ದರು ಎಂದು ಎನ್‌ಎಸ್‌ಸಿ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಪೊಲಿಟಿಕೊ ಡಾಟ್ ಕಾಮ್ ಜಾಲತಾಣ ವರದಿ ಮಾಡಿದೆ.
‘ಮೋದಿ ಭೇಟಿ ಹಿನ್ನೆಲೆಯಲ್ಲಿ ದಕ್ಷಿಣ ಏಷ್ಯಾದ ನಕಾಶೆಯ ಬಗ್ಗೆ ಟ್ರಂಪ್ ಅಧ್ಯಯನ ಮಾಡುತ್ತಿದ್ದರು. ಆಗ, ನೇಪಾಳ ಮತ್ತು ಭೂತಾನ್ ಹೆಸರುಗಳನ್ನು ತಪ್ಪಾಗಿ ಉಚ್ಚರಿಸಿದ್ದ ಅವರು ಅವೆರಡನ್ನೂ ಭಾರತದ ಭಾಗಗಳು ಎಂದೇ ಭಾವಿಸಿದ್ದರು. ನೇಪಾಳ, ಭೂತಾನ್ ಎಲ್ಲಿವೆ ಎಂಬುದೂ ಅವರಿಗೆ ಗೊತ್ತಿರಲಿಲ್ಲ’ ಎಂದು ಅಂದಿನ ಸಭೆಯ ಬಗ್ಗೆ ಮಾಹಿತಿ ಇದ್ದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
‘ಮಹತ್ವದ ಸಭೆ, ಮಾತುಕತೆಗಳ ಸಂದರ್ಭ ಬೇರೆ ರಾಷ್ಟ್ರಗಳ ಮತ್ತು ಅಲ್ಲಿನ ನಾಯಕರ ಹೆಸರುಗಳನ್ನು ಟ್ರಂಪ್ ಸರಿಯಾಗಿ ಉಚ್ಚರಿಸಬೇಕು. ಆ ಬಗ್ಗೆ ಸಿದ್ಧತೆ ನಡೆಸಬೇಕು ಎಂದು ಬಯಸುತ್ತಿದ್ದೆವು. ಆದರೆ, ಫಲಿತಾಂಶ ಬೇರೆಯೇ ಆಗಿರುತ್ತಿತ್ತು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಿದೇಶಾಂಗ ವ್ಯವಹಾರದಲ್ಲಿ ಹಿಂದೆ’: ಟ್ರಂಪ್ ಅವರು ವಿದೇಶಾಂಗ ವ್ಯವಹಾರಗಳಲ್ಲಿ ಸದಾ ಹಿಂದಿರುತ್ತಾರೆ. ಪ್ರಮುಖ ರಾಷ್ಟ್ರಗಳ, ಅಲ್ಲಿನ ನಾಯಕರ, ಅಲ್ಲಿನ ನಕಾಶೆಯ ಮತ್ತು ಅಲ್ಲಿನ ಸಮಯದ (ಟೈಂ ಝೋನ್) ಬಗ್ಗೆ ಕನಿಷ್ಠ ತಿಳಿವಳಿಕೆಯನ್ನೂ ಟ್ರಂಪ್ ಹೊಂದಿರುವುದಿಲ್ಲ. ತಯಾರಿಯನ್ನೂ ಮಾಡಿಕೊಳ್ಳುವುದಿಲ್ಲ ಎಂಬ ಅಧಿಕಾರಿಗಳ ಹೇಳಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಕಳೆದ ವರ್ಷ ಮಾತನಾಡಿದ್ದ ಟ್ರಂಪ್, ನಮೀಬಿಯಾವನ್ನು ‘ನಂಬಿಯಾ’ ಎಂದು ಉಚ್ಚರಿಸಿದ್ದರು.
ಬೇರೆ ರಾಷ್ಟ್ರಗಳ ನಾಯಕರ ಜತೆ ದೂರವಾಣಿ ಮೂಲಕ ಮಾತನಾಡಬೇಕು ಅನ್ನಿಸಿದಲ್ಲಿ ಆ ಕ್ಷಣವೇ ಕರೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದರು. ತಾನು ಕರೆ ಮಾಡಬೇಕು ಎಂದು ಬಯಸಿದ ರಾಷ್ಟ್ರದಲ್ಲಿ ಸಮಯ ಎಷ್ಟಾಗಿರಬಹುದು? ಅಲ್ಲಿನ ಮುಖ್ಯಸ್ಥರು ಸದ್ಯ ತಮ್ಮ ಕರೆಗೆ ಲಭ್ಯರಿರಬಹುದೇ ಎಂಬ ಬಗ್ಗೆಯೂ ಟ್ರಂಪ್ ಯೋಚಿಸುವುದಿಲ್ಲ. ಆಪ್ತರು ನೀಡುವ ಮಾಹಿತಿ, ಸಲಹೆಗಳಿಗೂ ಸೊಪ್ಪುಹಾಕುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಒಂದು ಬಾರಿ ಅಪರಾಹ್ನ ಜಪಾನ್ ಪ್ರಧಾನಿ ಶಿಂಜೋ ಅಬೆಗೆ ದೂರವಾಣಿ ಕರೆ ಮಾಡುವಂತೆ ಟ್ರಂಪ್ ಸೂಚಿಸಿದ್ದರು. ಆದರೆ, ಆಗ ಜಪಾನ್‌ನಲ್ಲಿ ಸಮಯ ತಡರಾತ್ರಿಯಾಗಿತ್ತು. ಜಪಾನ್ ಪ್ರಧಾನಿ ನಿದ್ರಿಸುತ್ತಿದ್ದಿರಬಹುದು. ಅಂತಹ ಸಂದರ್ಭದಲ್ಲಿ ವಿದೇಶಿ ನಾಯಕರ ಬಳಿ ಮಾತನಾಡಲು ಅನುಮತಿ ಕೋರುವುದು ಶಿಷ್ಟಾಚಾರವಾಗಿರುವುದಿಲ್ಲ. ಈ ವಿಚಾರವನ್ನು ಟ್ರಂಪ್ ಅವರಿಗೆ ಮನವರಿಕೆ ಮಾಡಿಕೊಡುವುದು ಪ್ರಯಾಸದ ಕೆಲಸ. ಅವರು ಯಾರಿಗಾದರೂ ಕರೆ ಮಾಡಿ ಮಾತನಾಡಬೇಕು ಎಂದರೆ ಸಾಕು, ಆ ಕೆಲಸ ಆಗಲೇ ಬೇಕು’ ಎಂದು ಅಧಿಕಾರಿಯೊಬ್ಬರು ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.