ADVERTISEMENT

ಚೀನಾ ವಿರುದ್ಧ ಟ್ರಂಪ್‌ ‘ಸಮರ ಯೋಜನೆ’: ಸ್ಟೀವ್‌ ಬ್ಯಾನನ್‌

ಪಿಟಿಐ
Published 21 ಜುಲೈ 2020, 5:39 IST
Last Updated 21 ಜುಲೈ 2020, 5:39 IST
ಸ್ಟೀವ್‌ ಬ್ಯಾನನ್‌
ಸ್ಟೀವ್‌ ಬ್ಯಾನನ್‌   

ವಾಷಿಂಗ್ಟನ್‌: ‘ಚೀನಾವನ್ನು ಸಮರ್ಥವಾಗಿ ಎದುರಿಸಲು ಮತ್ತು ಅಲ್ಲಿನ ಕಮ್ಯುನಿಸ್ಟ್‌ ಪಾರ್ಟಿಯನ್ನು ಕೆಳಗಿಳಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಸುಸಂಬದ್ಧವಾದ ‘ಸಮರ ಯೋಜನೆ’ಯನ್ನು ರೂಪಿಸಿದೆ. ಗಡಿ ವಿಚಾರದಲ್ಲಿ ಭಾರತದಂಥ ಮಿತ್ರರಾಷ್ಟ್ರಗಳ ಬೆಂಬಲಕ್ಕೆ ನಿಲ್ಲುವುದೂ ಈ ಯೋಜನೆಯ ಭಾಗವಾಗಿದೆ’ ಎಂದು ಶ್ವೇತಭವನದ ಮಾಜಿ ನೀತಿ ನಿರೂಪಕ ಸ್ಟೀವ್‌ ಬ್ಯಾನನ್‌ ಹೇಳಿದ್ದಾರೆ.

ಕಳೆದ ಬಾರಿಯ ಚುನಾವಣೆಯಲ್ಲಿ ನೀತಿ ನಿರೂಪಕರಾಗಿ ಟ್ರಂಪ್‌ ಅವರ ಗೆಲುವಿನಲ್ಲಿ ಬ್ಯಾನನ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಆದರೆ 2017ರಲ್ಲಿ ಅವರು ಆ ಹುದ್ದೆಯನ್ನು ತೊರೆದಿದ್ದರು. ತಾವಾಗಿಯೇ ಹುದ್ದೆ ತೊರೆದರೇ ಅಥವಾ ಟ್ರಂಪ್‌ ಇವರನ್ನು ವಜಾ ಮಾಡಿದರೇ ಎಂಬುದು ಸ್ಪಷ್ಟವಾಗಿಲ್ಲ.

‘ಚೀನಾದ ಸರ್ವನಾಶಕ್ಕಾಗಿ ನಾಲ್ವರು ಯೋಧರ ‘ಯುದ್ಧ ಮಂಡಳಿ’ಯನ್ನು ಟ್ರಂಪ್‌ ಸಿದ್ಧಪಡಿಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್‌ ಒ’ಬ್ರಿಯಾನ್‌, ಎಫ್‌ಬಿಐ ಮುಖ್ಯಸ್ಥ ಕ್ರಿಸ್ಟೋಫರ್‌ ವ್ರೇ, ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹಾಗೂ ಅಟಾರ್ನಿ ಜನರಲ್‌ ವಿಲಿಯಂ ಬಾರ್‌ ಈ ಯೋಧರಾಗಿದ್ದಾರೆ.

ADVERTISEMENT

‘ಇವರಲ್ಲಿ ಒ’ಬ್ರಿಯಾನ್‌, ಬಾರ್‌ ಹಾಗೂ ವ್ರೇ ಅವರು ಕಳೆದ ಮೂರು ವಾರಗಳಲ್ಲಿ ಮೂರು ಪ್ರಮುಖ ಭಾಷಣಗಳನ್ನು ಮಾಡಿದ್ದಾರೆ. ಈ ವಾರಾಂತ್ಯದಲ್ಲಿ ಪಾಂಪಿಯೊ ಅವರು ಚೀನಾದ ಬಗ್ಗೆ ಪ್ರಮುಖ ಭಾಷಣ ಮಾಡಲಿದ್ದಾರೆ.

‘ಚೀನಾದ ಕಮ್ಯುನಿಸ್ಟ್‌ ಪಕ್ಷವನ್ನು ಮಾಹಿತಿ ತಂತ್ರಜ್ಞಾನ ಮತ್ತು ಆರ್ಥಿಕತೆಯ ಮಾರ್ಗಗಳಲ್ಲಿ ಎದುರಿಸಿ ಆ ನಂತರ ಮಿತ್ರರಾಷ್ಟ್ರಗಳ ಜತೆ ಸೇರಿ ದಕ್ಷಿಣ ಚೀನಾ ಸಮುದ್ರ ವಿಚಾರವನ್ನು ತೆರೆಯಲು ವ್ಯವಸ್ಥಿತ ಯೋಜನೆಯನ್ನು ಈ ನಾಲ್ವರು ಯೋಧರು ಸಿದ್ಧಪಡಿಸಿದ್ದಾರೆ’ ಎಂದು ಬ್ಯಾನನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.