ವಾಷಿಂಗ್ಟನ್: ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಗುಂಡಿನ ದಾಳಿಯಿಂದ ಪಾರಾಗಿದ್ದ ಮಾಜಿ ಅಧ್ಯಕ್ಷ, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, 12 ವಾರಗಳ ಬಳಿಕ ಮತ್ತದೇ ಪ್ರದೇಶದಲ್ಲಿ ಬಹಿರಂಗ ಪ್ರಚಾರ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಟ್ರಂಪ್ ಅವರಿಗೆ ಬೆಂಬಲ ಸೂಚಿಸಿರುವ ಟೆಸ್ಲಾ ಮಾಲೀಕ, ಉದ್ಯಮಿ ಇಲಾನ್ ಮಸ್ಕ್, ಸಂವಿಧಾನ ರಕ್ಷಣೆಗಾಗಿ ಟ್ರಂಪ್ ಅವರಿಗೆ ಮತ ಚಲಾಯಿಸಲು ಮನವಿ ಮಾಡಿದ್ದಾರೆ.
ನೆರೆದಿದ್ದ ಅಪಾರ ಸಂಖ್ಯೆಯ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, 'ಕಮಲಾ ಹ್ಯಾರಿಸ್ ಅವರ ಕೆಟ್ಟ ಆಡಳಿತದಿಂದ ಮುಕ್ತಗೊಳಿಸಲು ಎಲ್ಲರೂ ಮತ ಚಲಾಯಿಸಬೇಕು' ಎಂದು ಮನವಿ ಮಾಡಿದ್ದಾರೆ.
ಹ್ಯಾರಿಸ್ ಅವರನ್ನು 'ತೀವ್ರ-ಎಡ ಮಾರ್ಕ್ಸ್‌ವಾದಿ' ಎಂದು ಕರೆದಿರುವ ಟ್ರಂಪ್, 'ದೇಶದ ಆರ್ಥಿಕತೆ, ಗಡಿ ಭದ್ರತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವೈಫಲ್ಯ ಕಂಡಿದ್ದಾರೆ' ಎಂದು ಆರೋಪಿಸಿದ್ದಾರೆ.
ಈ ವೇಳೆ ಟ್ರಂಪ್ ಅವರಿಗೆ ಬೆಂಬಲ ಸೂಚಿಸಿದ ಇಲಾನ್ ಮಸ್ಕ್, 'ಇದು ಸಾಮಾನ್ಯ ಚುನಾವಣೆಯಲ್ಲ. ನಮ್ಮ ಜೀವಮಾನದ ಅತ್ಯಂತ ಮಹತ್ವದ ಚುನಾವಣೆಯಾಗಿದೆ' ಎಂದಿದ್ದಾರೆ.
'ಸಂವಿಧಾನವನ್ನು ರಕ್ಷಿಸಲು ಟ್ರಂಪ್ ಗೆಲ್ಲಲೇಬೇಕು. ಅಮೆರಿಕದ ಪ್ರಜಾಪ್ರಭುತ್ವವನ್ನು ಕಾಪಾಡಲು ಟ್ರಂಪ್ ಗೆಲ್ಲಲೇಬೇಕು. ಇದು ಗೆಲ್ಲಲೇಬೇಕಾದ ಪರಿಸ್ಥಿತಿ. ಎಲ್ಲರೂ ಟ್ರಂಪ್ ಪರ ಮತ ಚಲಾಯಿಸಬೇಕು' ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಾವೇಶದಲ್ಲಿ 'ಫೈಟ್, ಫೈಟ್, ಫೈಟ್' ಎಂಬ ಘೋಷವಾಕ್ಯ ಮೊಳಗುತ್ತಲೇ ಇದ್ದವು.
ಜುಲೈ 13ರಂದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ 78 ವರ್ಷದ ಟ್ರಂಪ್ ಅವರನ್ನು ಗುಂಡಿಕ್ಕಿ ಹತ್ಯೆಗೈಯುವ ಯತ್ನ ನಡೆದಿತ್ತು. ಟ್ರಂಪ್ ಅವರು ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದನು. ಟ್ರಂಪ್ ಅವರ ಕಿವಿಗೆ ಗಾಯವಾಗಿತ್ತು. ಟ್ರಂಪ್ ಮೇಲೆ ದಾಳಿ ನಡೆಸಿದ ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಸೀಕ್ರೆಟ್ ಸರ್ವಿಸ್ ತಿಳಿಸಿತ್ತು.
ಸೆಪ್ಟೆಂಬರ್ 15ರಂದು ಫ್ಲೋರಿಡಾದ ವಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಎರಡನೇ ಸಲ ಹತ್ಯೆಗೈಯುವ ಯತ್ನ ನಡೆದಿತ್ತು.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ರಂದು ನಡೆಯಲಿದೆ. ಟ್ರಂಪ್ ಮತ್ತು ಅಮೆರಿಕದ ಅಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.