ವಾಷಿಂಗ್ಟನ್: ವಿಶ್ವದ ಹಿರಿಯಣ್ಣ ಎನಿಸಿರುವ ಅಮೆರಿಕದ ಅಧ್ಯಕ್ಷ ಗಾದಿಗೇರಲು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವಿನ ಹೋರಾಟ ಅಂತಿಮ ಘಟ್ಟ ತಲುಪಿದೆ.
ಆಕ್ರಮಣಕಾರಿ ಸ್ವಭಾವದ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗುವರೇ ಅಥವಾ ಕಪ್ಪು ವರ್ಣೀಯರೂ ಆಗಿರುವ ಏಷ್ಯಾ ಮೂಲದ ಕಮಲಾ ಹ್ಯಾರಿಸ್ ಆಯ್ಕೆ ಆಗುವ ಮೂಲಕ ಅಮೆರಿಕದಲ್ಲಿ ಇತಿಹಾಸ ಸೃಷ್ಟಿಯಾಗುವುದೇ ಎನ್ನುವ ಕುತೂಹಲ ತಾರಕಕ್ಕೇರಿದೆ.
2020ರಲ್ಲಿ ನಡೆದಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಪರಾಭವಗೊಂಡಿದ್ದ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಭವಿಷ್ಯ ಕೊನೆಗೊಂಡಿತು ಎಂದೇ ಭಾವಿಸಲಾಗಿತ್ತು. ಆದರೆ, ಅಂಥವರ ನಿರೀಕ್ಷೆ ಹುಸಿಯಾಗಿದೆ. ಟ್ರಂಪ್ ಇಂದು ನಡೆಯುತ್ತಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಅಬ್ಬರಿಸುತ್ತಿದ್ದಾರೆ.
ಚುನಾವಣೆ ಘೋಷಣೆಯಾದ ನಂತರ ಕಣದಿಂದ ಹಿಂದೆ ಸರಿದ ಜೋ ಬೈಡನ್ ಅವರ ಬದಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಣದಲ್ಲಿದ್ದಾರೆ. ಒಂದೊಮ್ಮೆ ಅವರು ಗೆದ್ದಲ್ಲಿ ಏಷ್ಯಾ ಮೂಲದ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕಳೆದ ಕೆಲ ತಿಂಗಳಿಂದ ಅಮೆರಿಕ ಮಾತ್ರವಲ್ಲದೆ ಜಗತ್ತಿನ ಇತರ ರಾಷ್ಟ್ರಗಳಿಗೂ ವ್ಯಾಪಿಸಿರುವ ಚುನಾವಣಾ ಜ್ವರವು, ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಅರಿಝೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ನೆವಾಡಾ, ಜಾರ್ಜಿಯಾ, ಮಿಷಿಗನ್ ಮತ್ತು ವಿಸ್ಕಾನ್ಸಿನ್ ಎಂಬ ಏಳು ರಾಜ್ಯಗಳಲ್ಲೂ ಕುತೂಹಲ ಮನೆ ಮಾಡಿದೆ. ಈ ಎಲ್ಲ ಕುತೂಹಲಕ್ಕೂ ಮಂಗಳವಾರ ನಡೆಯಲಿರುವ ಚುನಾವಣೆ ಮೂಲಕ ತೆರೆ ಬೀಳಲಿದೆ.
ರಿಪಬ್ಲಿಕನ್ ಪಕ್ಷದ 78 ವರ್ಷದ ಟ್ರಂಪ್ ಅವರ ಮೇಲೆ ಎರಡು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿದ್ದವು. ಈ ದಾಳಿಯಲ್ಲಿ ಬದುಕುಳಿದ ಟ್ರಂಪ್ ಅವರು ಕೆಲ ಪ್ರಕರಣಗಳಲ್ಲಿ ಜೈಲು ಶಿಕ್ಷೆಗೂ ಒಳಗಾಗಿದ್ದರು. ಹೀಗಾಗಿ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಪಡೆದಿರುವ ಟ್ರಂಪ್, ಗೆಲ್ಲುವ ಭರವಸೆ ವ್ಯಕ್ತಪಡಿಸಿದ್ದಾರೆ.
ಭಾರತ ಮೂಲದ 60 ವರ್ಷದ ಹ್ಯಾರಿಸ್ ಅವರ ಹೆಸರನ್ನು ಕಳೆದ ಜುಲೈನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್ ಪಕ್ಷ ಅಂತಿಮಗೊಳಿಸಿತು. ಇವರು ಗೆದ್ದಲ್ಲಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ಸೇರುವ ಅವಕಾಶ ಸಿಗಲಿದೆ.
ಮಂಗಳವಾರ ಚುನಾವಣೆ ನಡೆಯುತ್ತದಾದರೂ, ಈವರೆಗಿನ ಟ್ರೆಂಡ್‌ನಲ್ಲಿ ಟ್ರಂಪ್ ಮತ್ತು ಕಮಲಾ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಒಟ್ಟು 7.7 ಕೋಟಿ ಮತದಾರರು ಈಗಾಗಲೇ ಮತ ಚಲಾಯಿಸಿದ್ದಾರೆ. ಆದರೆ ಈ ಅಂತಿಮ ದಿನದಲ್ಲಿ ಯಾರ ಪ್ರಚಾರ ಮತದಾರರನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದಕ್ಕೆ ತೆರೆ ಬೀಳಲಿದೆ.
ಸಾಮಾಜಿಕ ಮಾಧ್ಯಮ, ಟಿ.ವಿ., ರೇಡಿಯೊಗಳಲ್ಲಿ ಅಂತಿಮ ಹಂತದ ಕ್ಯಾಂಪೇನ್‌ಗಳು ಅಬ್ಬರಿಸಿದ್ದವು. ಇಬ್ಬರು ಅಭ್ಯರ್ಥಿಗಳು ಹಾಗೂ ಅವರ ಪರ ಪ್ರಚಾರಕರು ತಮ್ಮ ಪ್ರಚಾರ ಮತದಾರರನ್ನು ತಲಪುವಲ್ಲಿ ಯಶಸ್ವಿಯಾಗಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಿಳಾ ಮತದಾರರು, ಯುವಕರು ಹಾಗೂ ವರ್ಣಾಧಾರಿತ ಮತದಾರರು ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇವರನ್ನು ಸೆಳೆಯಲು ಟ್ರಂಪ್ ತಾವು ಪ್ರಚಾರ ನಡೆಸುವುದರ ಜತೆಗೆ, ಹೊರಗುತ್ತಿಗೆ ಮೂಲಕವೂ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ತನ್ನ ಹತ್ಯೆಗೆ ನಿರಂತರ ಸಂಚು ನಡೆಯುತ್ತಿದೆ ಎಂದು ಟ್ರಂಪ್ ಆರೋಪಿಸುತ್ತಿದ್ದಾರೆ. ಟ್ರಂಪ್ ಅವರಂತವರು ಪ್ರಜಾಪ್ರಭುತ್ವಕ್ಕೇ ಮಾರಕ ಎಂದು ಕಮಲಾ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಈ ಇಬ್ಬರ ಅಬ್ಬರದ ಪ್ರಚಾರದ ನಡುವೆ ಕಣದಲ್ಲಿರುವ ಇತರ ಅಭ್ಯರ್ಥಿಗಳಾದ ಲಿಬರ್ಟೇರಿಯನ್ ಪಕ್ಷದ ಚೇಸ್ ಆಲಿವರ್, ಗ್ರೀನ್ ಪಕ್ಷದ ಜಿಲ್ ಸ್ಟೀನ್, ಸ್ವತಂತ್ರವಾಗಿ ಸ್ಪರ್ಧಿಸಿರುವ ಕಾರ್ನಲ್ ವೆಸ್ಟ್ ಅವರ ಸ್ಪರ್ಧೆ ಗೌಣವಾಗಿದೆ.
ಅಮೆರಿಕದಲ್ಲಿರುವ ಒಟ್ಟು ಪ್ರಾಂತ್ಯಗಳಲ್ಲಿ ಪೆನ್ಸಿಲ್ವೇನಿಯಾ ಅತಿ ದೊಡ್ಡ ಸ್ಪರ್ಧಾ ಕಣವಾಗಿದೆ. ಒಟ್ಟು 270ರಲ್ಲಿ 19 ಎಲೆಕ್ಟ್ರಾಲ್ ಕಾಲೇಜು ಮತಗಳು ಇಲ್ಲಿವೆ. ಕಮಲಾ ಅವರಿಗೆ ಗೆಲ್ಲಲು ಏಳು ಪ್ರಾಂತ್ಯಗಳಲ್ಲಿ ಒಟ್ಟು 45 ಎಲೆಕ್ಟ್ರಾಲ್ ಮತಗಳ ಅಗತ್ಯವಿದೆ. ಟ್ರಂಪ್ ಅವರಿಗೆ 51 ಮತಗಳ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.