ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್, ಆಡಳಿತ ಯಂತ್ರವನ್ನು ಸಜ್ಜುಗೊಳಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಮತ್ತಷ್ಟು ಆಯಕಟ್ಟಿನ ಸ್ಥಳಗಳಿಗೆ ನೇಮಕವನ್ನು ಮಾಡಿದ್ದಾರೆ.
ಶ್ವೇತಭವನದ ಸಂವಹನ ನಿರ್ದೇಶಕರಾಗಿ ಸ್ಟೀವನ್ ಚೆಯಂಗ್, ಆಪ್ತ ಕಚೇರಿ ಉಸ್ತುವಾರಿ
ಯಾಗಿ ಸೆರ್ಗಿಯೊ ಗೊರ್ ರನ್ನು ನೇಮಿಸಲಾಗಿದೆ ಎಂದೂ ಶನಿವಾರ ಪ್ರಕಟಿಸಿದ್ದಾರೆ.
ಈ ಇಬ್ಬರು 2016ನೇ ಸಾಲಿನ ಚುನಾವಣಾ ಪ್ರಚಾರದ ಅವಧಿಯಿಂದಲೂ ಟ್ರಂಪ್ ಅವರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂವಹನ ಹೊಣೆ ಮತ್ತು ಅಧ್ಯಕ್ಷೀಯ ಕಚೇರಿಯ ಸಿಬ್ಬಂದಿ ನೇಮಕದಲ್ಲಿ ಅವರ ಆಪ್ತ ಕಚೇರಿಯ ಕಾರ್ಯ ಪ್ರಮುಖವಾದುದಾಗಿದೆ.
‘ಈ ಇಬ್ಬರೂ ನಂಬಿಕಸ್ಥ ಸಲಹೆಗಾರರು. ಶ್ವೇತಭವನದಲ್ಲಿ ಈ ಇಬ್ಬರನ್ನು ಹೊಂದಲು ನನಗೆ ಖುಷಿಯಾಗುತ್ತದೆ’ ಎಂದು ಟ್ರಂಪ್ ಈ ಕುರಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾಗಿ, 27 ವರ್ಷದ ಕರೊಲಿನ್ ಲೀವಿಟ್ ಅವರನ್ನು ನೇಮಿಸಿದ್ದಾರೆ. ಟ್ರಂಪ್ ಅಧಿಕಾರ ಸ್ವೀಕರಿಸಲಿರುವ ಜನವರಿ 20ರಿಂದಲೇ ಇವರ ಕಾರ್ಯವೂ ಆರಂಭವಾಗಲಿದೆ.
ಟ್ರಂಪ್ ಅವರ ಪ್ರಚಾರ ಕುರಿತ ರಾಷ್ಟ್ರೀಯ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಕರೊಲಿನ್, ಟ್ರಂಪ್ ಹಿಂದೆ ಅಧ್ಯಕ್ಷರಾಗಿದ್ದಾಗ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಆಗಿದ್ದರು.
‘ಚುನಾವಣಾ ಪ್ರಚಾರದಲ್ಲಿ ಲೀವಿಟ್ ಗಮನಾರ್ಹ ಕೆಲಸ ಮಾಡಿದ್ದಾರೆ. ಸಂವಹನವನ್ನು ಅವರು ಪರಿಣಾಮಕಾರಿಯಾಗಿ ನಿಭಾಯಿಸುತ್ತಾರೆ’ ಎಂದು ಟ್ರಂಪ್ ಶ್ಲಾಘಿಸಿದ್ದಾರೆ.
ಒಳಾಡಳಿತ ಇಲಾಖೆ, ಇಂಧನ ಮಂಡಳಿ ಮುಖ್ಯಸ್ಥರಾಗಿ ಡೌಗ್ ಬರ್ಗಮ್
ವಾಷಿಂಗ್ಟನ್: ಒಳಾಡಳಿತ ಇಲಾಖೆಯ ಮುಖ್ಯಸ್ಥರಾಗಿ ನಾರ್ಥ್ ಡಕೊಟದ ಗವರ್ನರ್ ಡೌಗ್ ಬರ್ಗಮ್ ಅವರನ್ನು ಟ್ರಂಪ್ ನೇಮಿಸಿದ್ದಾರೆ. ಜೊತೆಗೆ ನೂತನ ರಾಷ್ಟ್ರೀಯ ಇಂಧನ ಮಂಡಳಿ ಮುಖ್ಯಸ್ಥರಾಗಿಯೂ ಬರ್ಗಮ್ ಕಾರ್ಯ ನಿರ್ವಹಿಸುವರು.
ಇಂಧನ ಉತ್ಪಾದನೆ, ವಿತರಣೆ, ನಿಯಂತ್ರಣ ಸರಬರಾಜು ವ್ಯವಸ್ಥೆಯ ಒಟ್ಟು ಮೇಲುಸ್ತುವಾರಿ ನಿಭಾಯಿಸುವರು. ರಾಷ್ಟ್ರೀಯ ಇಂಧನ ಮಂಡಳಿ ಅಧ್ಯಕ್ಷರಾಗಿ ಅವರು ರಾಷ್ಟ್ರೀಯ ಭದ್ರತಾ ಮಂಡಳಿ ಸದಸ್ಯರಾಗಿಯೂ ಇರುತ್ತಾರೆ ಎಂದು ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
67 ವರ್ಷದ ಬರ್ಗಮ್ 2016ರಲ್ಲಿ ನಾರ್ಥ್ ಡಕೊಟ ಗವರ್ನರ್ ಆಗಿ ಆಯ್ಕೆ ಆಗಿದ್ದರು. ಇವರು ಸ್ಥಾಪಿಸಿದ್ದ ಗ್ರೇಟ್ ಪ್ಲೇನ್ಸ್ ಸಾಫ್ಟ್‌ವೇರ್ ಕಂಪನಿಯನ್ನು ಮೈಕ್ರೋಸಾಫ್ಟ್ ಸಂಸ್ಥೆಯು 2001ರಲ್ಲಿ ಸ್ವಾಧೀನ ಪಡೆದಿತ್ತು. ರಿಯಲ್ ಎಸ್ಟೇಟ್ ಕಂಪನಿಯನ್ನು ಅವರು ಹೊಂದಿದ್ದಾರೆ.
ರಕ್ಷಣಾ ಇಲಾಖೆ ಮುಖ್ಯಸ್ಥರ ನೇಮಕಕ್ಕೆ ಆಕ್ಷೇಪ
ವಾಷಿಂಗ್ಟನ್: ರಕ್ಷಣಾ ಇಲಾಖೆಯ ಮುಖ್ಯಸ್ಥರಾಗಿ ಅಮೆರಿಕದ ಆರ್ಮಿ ನ್ಯಾಷನಲ್ ಗಾರ್ಡ್‌ನ ಮಾಜಿ ಸದಸ್ಯ ಪೀಟ್ ಹೆಗ್‌ಸೆತ್ ಆಯ್ಕೆಗೆ ಆಕ್ಷೇಪ ವ್ಯಕ್ತವಾಗಿದೆ.
ಹೆಗ್‌ಸೇತ್ ತಮ್ಮ ತೋಳಿನಲ್ಲಿ ಎಕ್ಸ್ ಗುರುತಿನ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದು, ಬಿಳಿಯ ಮೂಲಭೂತವಾದಿಗಳ ಸಮೂಹದ ಸೂಚಕ. ಅವರು ‘ಆಡಳಿತದೊಳಗಿನ ತೊಡಕು’ ಆಗಲಿದ್ದಾರೆ ಎಂದು ಆಕ್ಷೇಪಿಸಲಾಗಿದೆ.
ಆರ್ಮಿ ನ್ಯಾಷನಲ್ ಗಾರ್ಡ್‌ನ ಮಾಜಿ ಭದ್ರತಾ ವ್ಯವಸ್ಥಾಪಕರು ಆಕ್ಷೇಪ ಕುರಿತ ಇ–ಮೇಲ್ ಅನ್ನು ಸುದ್ದಿಸಂಸ್ಥೆಗೆ ಕಳುಹಿಸಿದ್ದಾರೆ. ಟ್ರಂಪ್ ಪರವಾದ ತಂಡ ಇದಕ್ಕೆ ಪ್ರತಿಕ್ರಿಯಿಸಿಲ್ಲ.
‘ಹಚ್ಚೆ ಹಾಕಿಸಿಕೊಂಡಿರುವ ಕಾರಣಕ್ಕೆ ನನ್ನನ್ನು ಮೂಲಭೂತವಾದಿ ಎಂದು ಗುರುತಿಸುವುದು ನ್ಯಾಯಸಮ್ಮತವಲ್ಲ’ ಎಂದು ಹೆಗ್‌ಸೆತ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.