ADVERTISEMENT

ಅಮೆರಿಕ ಅಧ್ಯಕ್ಷೀಯ ಚುನಾವಣೆ: ವೋಟರ್ ಐಡಿ ಕಡ್ಡಾಯಕ್ಕೆ ಡೊನಾಲ್ಡ್ ಟ್ರಂಪ್ ಆಗ್ರಹ

ಪಿಟಿಐ
Published 4 ನವೆಂಬರ್ 2024, 3:08 IST
Last Updated 4 ನವೆಂಬರ್ 2024, 3:08 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್: ನಾಳೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ವೋಟರ್ ಐಡಿ ಕಡ್ಡಾಯಕ್ಕೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.

ಸದ್ಯದ ಮತದಾನ ಪದ್ಧತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಈ ಕೊನೆಯ ಹೋರಾಟದಲ್ಲಿ ತಮಗೆ ಮತ ಹಾಕುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ. ಮತದಾನದಲ್ಲಿ ವೋಟರ್ ಐಡಿ ಕಡ್ಡಾಯ ಮಾಡಬೇಕು. ವೋಟರ್ ಐಡಿ ಕಡ್ಡಾಯವನ್ನು ವಿರೋಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷವು ಚುನಾವಣಾ ಅಕ್ರಮ ನಡೆಸುವ ಹುನ್ನಾರ ನಡೆಸಿದೆ ಎಂದು ಹೇಳಿದ್ದಾರೆ.

ADVERTISEMENT

'ನಾವು ಮತದಾರರ ಗುರುತಿನ ಚೀಟಿಯನ್ನು ಏಕೆ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಾಗುತ್ತಿಲ್ಲ. ವೋಟರ್ ಐಡಿ ಕಡ್ಡಾಯ ಮಾಡದಿರುವ ಏಕೈಕ ಉದ್ದೇಶ ಮೋಸ ಮಾಡುವುದೇ ಆಗಿದೆ. ಅದು ಬಿಟ್ಟರೆ ಬೇರೆ ಯಾವುದೇ ಕಾರಣ ನನಗೆ ಕಾಣುತ್ತಿಲ್ಲ. ನಿಜವಾದ ಡೆಮಾಕ್ರಟಿಕ್ ವೋಟರ್ ಐಡಿ ಬೇಕೆಂದು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಯಾರೂ ಮಾತನಾಡದಿರುವುದು ನಾಚಿಕೆಗೇಡಿನ ಸಂಗತಿ . ನಾನು ಮಾತ್ರ ಅದರ ಬಗ್ಗೆ ಮಾತನಾಡುತ್ತೇನೆ. ಏಕೆಂದರೆ, ಎಲ್ಲರೂ ಅದರ ಬಗ್ಗೆ ಮಾತನಾಡಲು ಹೆದರುತ್ತಾರೆ. ನಂತರ ಅವರು ನನ್ನನ್ನು ಪಿತೂರಿ ಕೋರ ಎಂದು ಕರೆದು ಬಾಯಿ ಮುಚ್ಚಿಸಲು ಬಯಸುತ್ತಾರೆ ಎಂದಿದ್ದಾರೆ. ವೋಟರ್ ಐಡಿ ಕಡ್ಡಾಯ ಮಾಡಿ ಮತದಾನವನ್ನು ಬೇಗ ಮುಗಿಸಬೇಕು. ಇಲ್ಲವಾದರೆ, ಅಕ್ರಮ ನಡೆಸುತ್ತಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.

‘ಕ್ಯಾಲಿಫೋರ್ನಿಯಾದಲ್ಲಿ ಅವರು ಒಂದು ಮಸೂದೆ ಜಾರಿಗೆ ತಂದಿದ್ದಾರೆ. ಅದರನ್ವಯ, ನೀವು ಅಧಿಕಾರಿಯಾಗಿದ್ದರೂ ಯಾರೊಬ್ಬರ ಮತದಾರರ ಗುರುತಿನ ಚೀಟಿಯನ್ನು ಕೇಳಲು ಅನುಮತಿ ಇಲ್ಲ. ಹಾಗೇನಾದರೂ ಕೇಳಿದರೆ, ನೀವು ಅಪರಾಧ ಎಸಗಿದಂತೆ. ಮತದಾನದ ವೇಳೆ ಮೋಸ ಮಾಡಲು ಅವರು ಈ ರೀತಿ ಮಾಡುತ್ತಿದ್ದಾರೆ’ಎಂದು ಟ್ರಂಪ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.