ADVERTISEMENT

ಬೈಡನ್‌ ವಿರುದ್ಧ ಷಡ್ಯಂತರ ರೂಪಿಸಿದ ಡೆಮಾಕ್ರಟಿಕ್‌ ಪಕ್ಷ: ಟ್ರಂಪ್‌ ಆರೋಪ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:20 IST
Last Updated 28 ಜುಲೈ 2024, 14:20 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ‘ಅಧ್ಯಕ್ಷ ಜೋ ಬೈಡನ್‌ ಅವರು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಲು ಡೆಮಾಕ್ರಟಿಕ್‌ ಪಕ್ಷ ಅವರ ವಿರುದ್ಧ ‘ಷಡ್ಯಂತರ’ ನಡೆಸಿತು. ಸ್ಪರ್ಧೆಯಿಂದ ಹೊರಗುಳಿಯುವಂತೆ ಒತ್ತಡ ಹೇರಿತು’ ಎಂದು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ತಮ್ಮ ಪ್ರಚಾರ ಸಭೆಯೊಂದರಲ್ಲಿ ಆರೋಪಿಸಿದರು.

‘ಸಂವಿಧಾನದ 25ನೇ ತಿದ್ದುಪಡಿಯನ್ನು ಬಳಸಿಕೊಂಡು ಬೈಡನ್‌ ಅವರನ್ನು ಅಧಿಕಾರದಿಂದ ಇಳಿಸುವುದಾಗಿ ಆ ಪಕ್ಷವು ಬೆದರಿಕೆ ಹಾಕಿತು. ದೈಹಿಕವಾಗಿಯೂ, ಬೌದ್ಧಿಕವಾಗಿಯೂ ನೀನು ಅಸಮರ್ಥ. ನೀನಾಗಿಯೇ ಸ್ಪರ್ಧೆಯಿಂದ ಹಿಂದೆ ಸರಿಯದಿದ್ದರೆ 25ನೇ ತಿದ್ದುಪಡಿ ಬಳಸಿಕೊಂಡು ನಾವೇ ಹೊರಹಾಕುತ್ತೇವೆ’ ಎಂದು ಆ ಪಕ್ಷವು ಬೈಡವ್‌ ಅವರನ್ನು ಬೆದರಿಸಿತು. ಬೈಡನ್‌ ಅವರನ್ನು ಬಹಳ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ’ ಎಂದು ಟ್ರಂಪ್‌ ದೂರಿದರು.

‘ಈ ಎಲ್ಲ ಬೆಳವಣಿಗೆಗಳು ಆದ ಬಳಿಕ, ಬೈಡನ್‌ ಅವರು ತಾವು ಸ್ಪರ್ಧೆಯಿಂದ ಹಿಂದೆಸರಿಯುತ್ತಿರುವುದಾಗಿ ಘೋಷಿಸಿದರು. ಆ ಬಳಿಕ, ಓಹ್‌! ನೋಡಿ ನೋಡಿ, ಬೈಡನ್‌ ಅವರದ್ದು ಎಂಥ ಮಹಾನ್‌ ವ್ಯಕ್ತಿತ್ವ ಎಂದು ಡೆಮಾಕ್ರಟಿಕ್‌ ಪಕ್ಷವು ಹೊಗಳಲು ಆರಂಭಿಸಿತು’ ಎಂದು ಟ್ರಂಪ್‌ ಹೇಳಿದರು.

ADVERTISEMENT

ಏನಿದು 25ನೇ ತಿದ್ದುಪಡಿ?

ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌ ಎಫ್‌. ಕೆನಡಿ ಅವರ ಹತ್ಯೆ ನಡೆದ ಸಂದರ್ಭದಲ್ಲಿ ಅಮೆರಿಕ ಕಾಂಗ್ರೆಸ್‌, ಅಮೆರಿಕ ಸಂವಿಧಾನಕ್ಕೆ 25ನೇ ತಿದ್ದುಪಡಿಯನ್ನು ಮಾಡಿತ್ತು. ಅಧ್ಯಕ್ಷರೊಬ್ಬರು ತನ್ನ ಉತ್ತರಾಧಿಕಾರಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ ತಿದ್ದುಪಡಿ ಇದಾಗಿದೆ. ಜೊತೆಗೆ, ಒಂದೊಮ್ಮೆ ಅಧ್ಯಕ್ಷನು ದೈಹಿಕವಾಗಿ ಅಶಕ್ತನಾಗಿದ್ದರೆ, ಆತನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಅಧಿಕಾರವು ಉಪಾಧ್ಯಕ್ಷನಿಗೆ ಮತ್ತು ಸಂಪುಟಕ್ಕೆ ಇರುತ್ತದೆ ಎಂಬುದನ್ನೂ ಈ ತಿದ್ದುಪಡಿ ಹೇಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.