ADVERTISEMENT

ಅಧ್ಯಕ್ಷೀಯ ಚುನಾವಣೆ ರೇಸ್‌ನಿಂದ ಬೈಡನ್ ನಿರ್ಗಮನ ಡೆಮಾಕ್ರಟಿಕ್ ದಂಗೆ ಎಂದ ಟ್ರಂಪ್

ಪಿಟಿಐ
Published 28 ಜುಲೈ 2024, 7:05 IST
Last Updated 28 ಜುಲೈ 2024, 7:05 IST
ಅಮೆರಿಕ ಅಧ್ಯಕ್ಷೀಯ ಚುನಾವಣೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಅಧ್ಯಕ್ಷ ಜೋ ಬೈಡನ್ ನಿರ್ಧಾರವು ಡೆಮಾಕ್ರಟಿಕ್ ಪಕ್ಷದಲ್ಲಿ ಎದ್ದಿದ್ದ ದಂಗೆಯ ಪರಿಣಾಮ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಒಳಗಿನ ದಂಗೆಯು ಅವರನ್ನು ಒತ್ತಾಯಪೂರ್ವಕವಾಗಿ ಹೊರಗೆ ಹಾಕಿದೆ ಎಂದು ಟ್ರಂಪ್ ಹೇಳಿದ್ದಾರೆ.

ಮಿನ್ನೆಸೋಟಾದಲ್ಲಿ ಶನಿವಾರ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ADVERTISEMENT

‘ಇದು ನಿಜವಾಗಿಯೂ ಡೆಮಾಕ್ರಟಿಕ್ ಪಕ್ಷ ನಡೆಸಿದ ದಂಗೆಯಾಗಿದೆ. 14 ಮಿಲಿಯನ್ ಮತ ಪಡೆದಿದ್ದ ವ್ಯಕ್ತಿಯ ವಿರುದ್ಧದ ದಂಗೆಯಾಗಿದೆ. ಅವರು ಸ್ಪರ್ಧೆಯಲ್ಲಿ ಮುಂದುವರಿಯಲು ಇಚ್ಛಿಸಿದ್ದರು. ಆದರೆ, ಪಕ್ಷದೊಳಗಿನವರೇ ಅವರನ್ನು ಮುಂದುವರಿಯಲು ಬಿಡಲಿಲ್ಲ. ಅವರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನೀವು ಹಿಂದೆ ಸರಿಯದಿದ್ದರೆ ಸುಲಭವಾಗಿ ನಿಮ್ಮನ್ನು ಕೆಳಗಿಳಿಸುತ್ತೇವೆ ಎಂದು ಬೆದರಿಸಿದ್ದರು’ಎಂದು ಟ್ರಂಪ್ ಹೇಳಿದ್ದಾರೆ.

‘25ನೇ ತಿದ್ದುಪಡಿ ಮೂಲಕ ಅವರು ಬೈಡನ್ ಅವರನ್ನು ಬೆದರಿಸಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿ ನೀವು ಅಸಮರ್ಥರಾಗಿದ್ದೀರಿ. ಈಗ ಸ್ಪರ್ಧೆಯಿಂದ ಹಿಂಪಡೆಯದಿದ್ದರೆ 25ನೇ ತಿದ್ದುಪಡಿ ಮೂಲಕ ನಿಮ್ಮನ್ನು ಕೆಳಗಿಳಿಸುತ್ತೇವೆ ಎಂದು ಡೆಮಾಕ್ರಟಿಕ್ ಪಕ್ಷದವರೇ ಬೆದರಿಸಿದ್ದರು’ ಎಂದು ದೂರಿದ್ದಾರೆ.

ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಹತ್ಯೆ ಬಳಿಕ ಅಧ್ಯಕ್ಷರ ಉತ್ತರಾಧಿಕಾರಿ ನಿರ್ಧಾರಕ್ಕೆ ಸಂವಿಧಾನದ 25ನೇ ತಿದ್ದುಪಡಿ ಜಾರಿಗೆ ಬಂದಿದೆ.

ಅಧ್ಯಕ್ಷ ದೈಹಿಕವಾಗಿ ಅಸರ್ಥನಾಗಿದ್ದಾನೆಂದು ಕಂಡುಬಂದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರವನ್ನೂ ಈ ತಿದ್ದುಪಡಿ, ಉಪಾಧ್ಯಕ್ಷರು, ಕ್ಯಾಬಿನೆಟ್‌ಗೆ ನೀಡಿದೆ.

‘ನಾನು ಹೊರಹೋಗುತ್ತಿದ್ದೇನೆ ಎಂದು ಬೈಡನ್ ಹೇಳಿದಾಗ, ಅವರು ಅತ್ಯಂತ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಧೈರ್ಯಶಾಲಿ ಎಂಬಿತ್ಯಾದಿ ನಕಲಿ ಸುದ್ದಿಗಳು ಹರದಾಡಿದವು. ಇಲ್ಲ, ಅವರನ್ನು ಒತ್ತಾಯಪೂರ್ವಕವಾಗಿ ಹೊರಗೆ ಕಳುಹಿಸಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

81 ವರ್ಷ ವಯಸ್ಸಿನ ಜೋ ಬೈಡನ್, ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಜುಲೈ 20ರಂದು ಘೋಷಿಸಿದ್ದರು. ಅಲ್ಲದೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ತಮ್ಮ ಬೆಂಬಲ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.