ವಾಷಿಂಗ್ಟನ್: ‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಬ್ಬ ಅಸ್ಥಿರ ವ್ಯಕ್ತಿಯಾಗಿದ್ದು, ಸೇಡು ತೀರಿಸಿಕೊಳ್ಳುವ ಗೀಳು ಹೊಂದಿದ್ದಾರೆ’ ಎಂದು ತೀವ್ರ ವಾಗ್ದಾಳಿ ನಡೆಸಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ‘ಅವ್ಯವಸ್ಥೆ ಸೃಷ್ಟಿಸುವ ಮತ್ತು ವಿಭಜನೆ ಮಾಡುವವರನ್ನು ತಿರಸ್ಕರಿಸಿ’ ಎಂದು ಕರೆ ನೀಡಿದರು.
ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 60 ವರ್ಷದ ಕಮಲಾ ಅವರು 78 ವರ್ಷದ ಟ್ರಂಪ್ ಅವರನ್ನು ಎದುರಿಸಲಿದ್ದಾರೆ.
ಚುನಾವಣಾ ಅಭಿಯಾನದ ಕೊನೆಯ ಪ್ರಮುಖ ಭಾಷಣ ಮಾಡಿದ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ತಮ್ಮನ್ನು ನವ ಪೀಳಿಗೆಯ ನಾಯಕತ್ವದ ಹೋರಾಟಗಾರ್ತಿ ಎಂದು ಪರಿಚಯಿಸಿಕೊಂಡರು.
‘ತನ್ನ ಧೋರಣೆಯನ್ನು ಒಪ್ಪದ ಅಮೆರಿಕದ ನಾಗರಿಕರ ವಿರುದ್ಧ ಮಾಜಿ ಅಧ್ಯಕ್ಷ ಟ್ರಂಪ್ ಸೇನೆ ಬಳಸಲು ಉದ್ದೇಶಿಸಿದ್ದಾರೆ. ಅಂತಹವರನ್ನು ಒಳಗಿನ ಶತ್ರುಗಳು ಎಂದೇ ಟ್ರಂಪ್ ಭಾವಿಸಿದ್ದಾರೆ’ ಎಂದು ಅವರು ದೂರಿದರು.
‘ದೇಶದ ಜನರ ಜೀವನವನ್ನು ಉತ್ತಮಗೊಳಿಸುವುದು ಹೇಗೆ ಎಂದು ಯೋಚಿಸಬೇಕಾದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ, ಹೇಗೆಲ್ಲ ಚಿಂತಿಸುತ್ತಿದ್ದಾರೆ ನೋಡಿ’ ಎಂದು ಅವರು ಹೇಳಿದರು.
ಯು.ಎಸ್ ಕ್ಯಾಪಿಟಲ್ ಅನ್ನು ದೋಚುವ ಸ್ವಲ್ಪ ಸಮಯಕ್ಕೂ ಮುನ್ನ 2021ರ ಜನವರಿ 6ರಂದು ವಾಷಿಂಗ್ಟನ್‌ನ ಎಲಿಪ್ಸ್‌ನಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್, ಹೋರಾಡುವಂತೆ ಕರೆ ನೀಡಿದ್ದರು ಎಂಬುದನ್ನು ಸ್ಮರಿಸಿದ ಕಮಲಾ ಅವರು, ‘ಅಧ್ಯಕ್ಷೀಯ ಚುನಾವಣೆಯು ಸ್ವಾತಂತ್ರ್ಯ ಮತ್ತು ಅವ್ಯವಸ್ಥೆ, ವಿಭಜನೆಯ ನಡುವಿನ ಆಯ್ಕೆಯಾಗಿದೆ’ ಎಂದು ಬಣ್ಣಿಸಿದರು.
‘ಟ್ರಂಪ್ ಅವರು ಕೆಲವರ ಹೆಸರಿನ ಪಟ್ಟಿಯನ್ನು ಹೊಂದಿದ್ದು, ಅಧಿಕಾರಕ್ಕೆ ಬಂದ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಉದ್ದೇಶಿಸಿದ್ದಾರೆ. ಅಲ್ಲದೆ ಜನವರಿ 6ರಂದು ಅಧಿಕಾರಿಗಳ ವಿರುದ್ಧ ದಾಳಿ ನಡೆಸಿದವರನ್ನು ಬಿಡುಗಡೆಗೊಳಿಸಲು ಬಯಸಿದ್ದಾರೆ’ ಎಂದು ದೂರಿದರು.
‘ನಾಟಕ, ಸಂಘರ್ಷ, ಭಯ ಮತ್ತು ವಿಭಜನೆಯ ಪುಟಗಳನ್ನು ಬದಲಿಸುವ ಸಮಯ ಬಂದಿದೆ’ ಎಂದ ಅವರು, ಅಮೆರಿಕದಲ್ಲಿ ಹೊಸ ಪೀಳಿಗೆಯ ನಾಯಕ್ವತ್ವದ ಸಮಯ ಬಂದಿದೆ ಎಂದು ಹೇಳಿದರು.
‘ನಾನು ಅಮೆರಿಕದ ಮುಂದಿನ ಅಧ್ಯಕ್ಷರಾಗುವ ಮೂಲಕ ಆ ನಾಯಕತ್ವವನ್ನು ವಹಿಸಿಕೊಳ್ಳಲು ಸಿದ್ಧಳಿದ್ದೇನೆ’ ಎಂದು ಭರವಸೆ ನೀಡಿದರು.
ಟ್ರಂಪ್ ಬೆಂಬಲಿಗರನ್ನು ಕಸಕ್ಕೆ ಹೋಲಿಸಿದ ಬೈಡನ್
ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರನ್ನು ಕಸಕ್ಕೆ ಹೋಲಿಸಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಜರಿದಿದ್ದಾರೆ. ಈ ಸಂಬಂಧ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ಶ್ವೇತ ಭವನ ‘ಅಧ್ಯಕ್ಷರು ಟ್ರಂಪ್ ಬೆಂಬಲಿಗರೊಬ್ಬರು ಬಳಸಿದ್ದ ಜನಾಂಗೀಯ ಭಾಷೆಯನ್ನು ಖಂಡಿಸಿದ್ದಾರೆಯೇ ಹೊರತು ಟ್ರಂಪ್ ಅವರ ಬೆಂಬಲಿಗರನ್ನು ಅವಮಾನಿಸಿಲ್ಲ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.