ADVERTISEMENT

ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಗೆ ಕಾಲ ಸನ್ನಿಹಿತ: ಡೊನಾಲ್ಡ್‌ ಟ್ರಂಪ್‌

‘ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ನಿಧಿ ಸಂರಕ್ಷಿಸುವ ಉದ್ದೇಶ’

ಪಿಟಿಐ
Published 2 ಫೆಬ್ರುವರಿ 2019, 11:40 IST
Last Updated 2 ಫೆಬ್ರುವರಿ 2019, 11:40 IST
   

ವಾಷಿಂಗ್ಟನ್‌: ಅಮೆರಿಕದೊಳಗೆ ಅಕ್ರಮ ವಲಸೆ ತಡೆಯಲು ಪಣ ತೊಟ್ಟಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದಕ್ಕಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಗೂ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.

ಅಕ್ರಮ ವಲಸೆ ತಡೆಯಲು ಮೆಕ್ಸಿಕೊ ಗಡಿಯಲ್ಲಿ ಬೃಹತ್‌ ಗೋಡೆ ನಿರ್ಮಿಸಲು ಉದ್ದೇಶಿಸಿರುವ ಟ್ರಂಪ್, ಇದಕ್ಕಾಗಿ ನಿಧಿ ಸಂಗ್ರಹಿಸಲು ತುರ್ತು ಪರಿಸ್ಥಿತಿ ಘೋಷಣೆ ಮಾಡಲು ತೀರ್ಮಾನಿಸಿದ್ದಾರೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯನ್ನು ಗೋಡೆ ನಿರ್ಮಾಣಕ್ಕೆ ವಿನಿಯೋಗಿಸಲು ಉದ್ದೇಶಿಸಿದ್ದಾರೆ. ಆದರೆ, ಇದಕ್ಕೆ ಸಂಸತ್ತಿನ ಅನುಮೋದನೆ ಪಡೆಯುವುದು ಕಡ್ಡಾಯ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದರೆ ಸಂಸತ್ತಿನ ಅನುಮೋದನೆ ಪಡೆಯುವ ಅವಶ್ಯಕತೆಯಿಲ್ಲ.

‘ಗಡಿ ಭದ್ರತಾ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳೊಂದಿಗೆ ಚರ್ಚಿಸುತ್ತಾ ಕೂತರೆ ಸಮಯ ವ್ಯರ್ಥ ಮಾಡಿದಂತೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಟ್ರಂಪ್, ‘ಈ ವಿಷಯದಲ್ಲಿ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ಕೀಳು ರಾಜಕಾರಣ ಮಾಡುತ್ತಿದ್ದಾರೆ’ ಎಂದೂ ದೂರಿದ್ದಾರೆ.

ADVERTISEMENT

‘ಗಡಿ ಭದ್ರತೆ ಎಷ್ಟು ಅವಶ್ಯಕ ಎನ್ನುವುದು ನ್ಯಾನ್ಸಿ ಅವರಿಗೆ ತಿಳಿದಿದೆ. ಆದರೂ, ಗಡಿ ಮುಕ್ತವಾಗಿರಬೇಕೆಂದು ಅವರು ಬಯಸುತ್ತಿದ್ದಾರೆ. ಮಾನವ ಕಳ್ಳಸಾಗಣೆ ಬಗ್ಗೆ ಅವರು ಚಿಂತಿಸುತ್ತಿಲ್ಲ’ ಎಂದು ಟ್ರಂಪ್‌ ಹರಿಹಾಯ್ದಿದ್ದಾರೆ.

ಮೆಕ್ಸಿಕೊ ಗಡಿಯಲ್ಲಿ ಬೃಹತ್‌ ಗೋಡೆ ನಿರ್ಮಾಣ ಮಾಡುವುದರಿಂದ ಶತಕೋಟಿ ಡಾಲರ್‌ಗಳಷ್ಟು ಹಣ ವ್ಯರ್ಥವಾಗುತ್ತದೆ ಎಂಬ ಕಾರಣದಿಂದ ನ್ಯಾನ್ಸಿ ಪೆಲೊಸಿ ಟ್ರಂಪ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.