ವಾಷಿಂಗ್ಟನ್: ನವೆಂಬರ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಗೆದ್ದು, ಅಮೆರಿಕ ಅಧ್ಯಕ್ಷನಾದಲ್ಲಿ ರಷ್ಯಾ–ಉಕ್ರೇನ್ ಯುದ್ಧ ನಿಲ್ಲಿಸುವುದಾಗಿ ಅಧ್ಯಕ್ಷ ಸ್ಥಾನದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರಿಗೆ ಭರವಸೆ ನೀಡಿದ್ದಾರೆ.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಥಾನಕ್ಕೆ ನಾಮನಿರ್ದೇಶನಗೊಂಡಿರುವ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಲು ಝೆಲೆನ್‌ಸ್ಕಿ ದೂರವಾಣಿ ಕರೆ ಮಾಡಿದ್ದರು. ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಕುರಿತು ಅವರು ಸಾಮಾಜಿಕ ಜಾಲತಾಣ ‘ಟ್ರೂತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಾನು ಅಮೆರಿಕದ ಮುಂದಿನ ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಜಗತ್ತಿನಲ್ಲಿ ಶಾಂತಿ ಸ್ಥಾಪಿಸುತ್ತೇನೆ. ಹಲವಾರು ಮುಗ್ದ ಜನರು ಜೀವ ಕಳೆದುಕೊಳ್ಳಲು ಕಾರಣವಾದ ಯುದ್ಧವನ್ನು ಕೊನೆಗೊಳಿಸುತ್ತೇನೆ ಎಂಬುದಾಗಿ ಝೆಲೆನ್‌ಸ್ಕಿ ಅವರಿಗೆ ವಾಗ್ದಾನ ಮಾಡಿದೆ‘ ಎಂದೂ ಅವರು ಬರೆದುಕೊಂಡಿದ್ದಾರೆ.
ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ರಿಪಬ್ಲಿಕನ್ ಪಕ್ಷದಿಂದ ನಾಮನಿರ್ದೇಶನಗೊಂಡ ನಂತರ, ಟ್ರಂಪ್ ಅವರು ವಿದೇಶಿ ನಾಯಕರೊಂದಿಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಹೀಗಾಗಿ, ಈ ಮಾತುಕತೆಗೆ ಮಹತ್ವ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.