ADVERTISEMENT

ವಿದೇಶಿ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಗ್ರೀನ್‌ ಕಾರ್ಡ್: ಟ್ರಂಪ್‌ ಒಲವು

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 15:44 IST
Last Updated 21 ಜೂನ್ 2024, 15:44 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌ : ವಲಸಿಗರ ವಿಷಯದಲ್ಲಿ ತಮ್ಮ ನಿಲುವು ಸಡಿಲಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕದ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಪೂರೈಸುವ ವಿದೇಶಿ ವಿದ್ಯಾರ್ಥಿಗಳಿಗೆ ಪದವಿ ಜೊತೆಗೆ ಸ್ವಾಭಾವಿಕವಾಗಿ ಗ್ರೀನ್‌ ಕಾರ್ಡ್ ಸಿಗಬೇಕು’ ಎಂದು ಪ್ರತಿಪಾದಿಸಿದ್ದಾರೆ. 

ಪದವಿ ಶಿಕ್ಷಣ ಪೂರೈಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾರತ ಅಥವಾ ಚೀನಾದಂತಹ ತಾಯ್ನಾಡಿಗೆ ಮರಳುವುದನ್ನು ತಡೆಯುವುದು ಇದರ ಉದ್ದೇಶ ಎಂದೂ ಹೇಳಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ವಲಸಿಗರನ್ನು ಕುರಿತ ವಿಷಯಗಳು ಪ್ರಮುಖ ಚರ್ಚಾವಸ್ತುವಾಗಿರುವ ಸಂದರ್ಭದಲ್ಲಿಯೇ ಟ್ರಂಪ್‌, ವಲಸಿಗರನ್ನು ಕುರಿತ ತಮ್ಮ ಈ ನಿಲುವು ಪ್ರಕಟಿಸಿದ್ದಾರೆ. 

ADVERTISEMENT

‘ಶಿಕ್ಷಣದಲ್ಲಿನ ಸಾಧನೆ ಆಧರಿಸಿ ವಲಸಿಗರಿಗೆ ಕಾನೂನುಬದ್ಧ ವ್ಯವಸ್ಥೆ ಮಾಡಿಕೊಡಬೇಕೆನ್ನುವುದನ್ನು ಎಂದಿಗೂ ನಾನು ಬೆಂಬಲಿಸುತ್ತೇನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನನ್ನ ನಿಲುವು ಏನೆಂದರೆ, ನೀವು ಕಾಲೇಜಿನಿಂದ ಪದವಿ ಪಡೆದ ಜೊತೆಗೆ, ಪದವಿ ಶಿಕ್ಷಣದ ಭಾಗವಾಗಿಯೇ ನಿಮಗೆ ಗ್ರೀನ್‌ ಕಾರ್ಡ್ ಸಿಗಬೇಕು. ಅದು, ದೇಶದಲ್ಲಿಯೇ ನೆಲೆಸಲು ನೆರವಾಗಬೇಕು. ಈ ನಿಯಮ ಕಿರಿಯ ಕಾಲೇಜುಗಳಿಗೂ ಅನ್ವಯ ಆಗಬೇಕು’ ಎಂದು 78 ವರ್ಷದ ಟ್ರಂಪ್‌ ‘ಆಲ್‌ ಇನ್’ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ. 

ಅಮೆರಿಕದಲ್ಲಿ ಗ್ರೀನ್‌ ಕಾರ್ಡ್‌ ಅನ್ನು ಅಧಿಕೃತವಾಗಿ ಶಾಶ್ವತ ನಿವಾಸಿ ಗುರುತುಪತ್ರ ಎಂದು ಪರಿಗಣಿಸಲಾಗುತ್ತದೆ. 

ಪಾಡ್‌ಕಾಸ್ಟ್‌ನ ಆಯೋಜಕರೊಬ್ಬರು, ‘ವಿಶ್ವದ ಪ್ರತಿಭಾನ್ವಿತರನ್ನು ಅಮೆರಿಕಕ್ಕೆ ಕರೆತರುವ ಭರವಸೆ ನೀಡಿ’ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ ಟ್ರಂಪ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಾರ್ಟಿ ಅಭ್ಯರ್ಥಿಯಾಗಬಹುದು ಎನ್ನಲಾದ ಟ್ರಂಪ್ ಅವರು, ‘ಅಮೆರಿಕ ಕಾಲೇಜುಗಳಲ್ಲಿ ಓದಿ ಪದವಿ ಪಡೆದವರು ಇಲ್ಲಿಯೇ ನೆಲಸಲು ಬಯಸುತ್ತಾರೆ. ಕಂಪನಿ ಸ್ಥಾಪಿಸಲು ಇಚ್ಛಿಸುತ್ತಾರೆ. ಆದರೆ, ಅದು ಸಾಧ್ಯವಾಗದು. ಬಳಿಕ ಭಾರತಕ್ಕೋ, ಚೀನಾಗೋ ಮರಳುತ್ತಾರೆ. ಅಲ್ಲಿ, ಕಂಪನಿ ಸ್ಥಾಪಿಸುತ್ತಾರೆ. ಸಾವಿರಾರು ಜನರಿಗೆ ಉದ್ಯೋಗ ನೀಡುತ್ತಾರೆ. ಕೋಟ್ಯಧಿಪತಿ ಆಗುತ್ತಾರೆ. ಅಂತಹ ಪ್ರತಿಭಾವಂತರು ಆ ಸಾಧನೆಯನ್ನು ಇಲ್ಲಿಯೇ ಇದ್ದು ಮಾಡಬಹುದು’ ಎಂದು ತಮ್ಮ ನಿಲುವಿಗೆ ಸಮರ್ಥನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.