ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡುಗಳಲ್ಲಿ ವಿಶೇಷ ಸರ್ಕಾರಿ ವಕೀಲ ಜಾಕ್ ಸ್ಮಿತ್ ಅವರನ್ನು ವಜಾ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ತಾವು ನೀಡಿರುವ ಸಂದರ್ಶನವೊಂದರಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ನಿಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ತಪ್ಪಿಸಲು ಸ್ಮಿತ್ ಅವರನ್ನು ವಜಾಗೊಳಿಸುವಿರಾ ಎಂಬ ಪ್ರಶ್ನೆಗೆ, ‘ಅಧಿಕಾರ ವಹಿಸಿಕೊಂಡ ಎರಡೇ ಸೆಕೆಂಡುಗಳಲ್ಲಿ ಅವರನ್ನು ವಜಾಗೊಳಿಸುವೆ. ಅದು ತುಂಬಾ ಸುಲಭ’ ಎಂದು ಉತ್ತರಿಸಿದ್ದಾರೆ.
2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರುಚಲು ಯತ್ನಿಸಿದ ಮತ್ತು ಶ್ವೇತಭವನದ ರಹಸ್ಯ ದಾಖಲೆಗಳನ್ನು ತಮ್ಮ ಖಾಸಗಿ ನಿವಾಸಕ್ಕೆ ಕೊಂಡೊಯ್ದ ಆರೋಪಗಳಡಿ ಟ್ರಂಪ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ವಕೀಲ ಜಾಕ್ ಸ್ಮಿತ್ ವಾದಿಸಿದ್ದರು.
ಸ್ಮಿತ್ ವಿರುದ್ಧ ಟೀಕೆ ಮಾಡುತ್ತಾ ಬಂದಿರುವ ಟ್ರಂಪ್, ‘ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸ್ವೀಕರಿಸಿದ ನಂತರ ಅವರನ್ನು ಕಿತ್ತೊಗೆಯುವೆ’ ಎಂದಿದ್ದರು. ಸ್ಮಿತ್ ಒಬ್ಬ ‘ಮೋಸಗಾರ’ ಎಂದು ಜರೆದಿದ್ದರು.
ಅಟಾರ್ನಿ ಜನರಲ್ ಮೆರಿಕ್ ಗಾರ್ಲಂಡ್ ಅವರು 2022ರಲ್ಲಿ ಸ್ಮಿತ್ ಅವರನ್ನು ವಿಶೇಷ ಸರ್ಕಾರಿ ವಕೀಲರಾಗಿ ನೇಮಕ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.