ADVERTISEMENT

ಡೊನಾಲ್ಡ್ ಟ್ರಂಪ್‌ಗೆ ಇರಾನ್‌ನಿಂದ ಬೆದರಿಕೆ

ಏಜೆನ್ಸೀಸ್
Published 17 ಜುಲೈ 2024, 15:04 IST
Last Updated 17 ಜುಲೈ 2024, 15:04 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಕೊಲ್ಲಲು ಇರಾನ್‌ ಸಂಚು ಹೂಡಿರುವ ವಿಷಯ ತಿಳಿದ ಬೆನ್ನಲ್ಲೇ ಅಮೆರಿಕದ ’ಸೀಕ್ರೆಟ್‌ ಸರ್ವೀಸ್‌’ ವಾರದ ಹಿಂದೆ ಟ್ರಂಪ್‌ ಅವರ ಭದ್ರತೆಯನ್ನು ಹೆಚ್ಚಿಸಿತ್ತು.

ಆದರೆ, ಪೆನ್ಸಿಲ್ವೇನಿಯಾದ ಬಟ್ಲರ್‌ ನಗರದಲ್ಲಿ ಟ್ರಂಪ್‌ ಅವರ ಹತ್ಯೆಗೆ ನಡೆದ ಯತ್ನಕ್ಕೂ ಇರಾನ್‌ ಮೂಲದ ಬೆದರಿಕೆಗೂ ಸಂಬಂಧ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಮೆರಿಕ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

ಟ್ರಂಪ್‌ ಅವರ ಹತ್ಯೆಗೆ ಇರಾನ್‌ ಯೋಜನೆ ರೂಪಿಸಿದೆ ಎಂಬ ಮಾಹಿತಿಯನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಪಡೆದಿವೆ. ಈ ಕಾರಣದಿಂದಲೇ ಟ್ರಂಪ್‌ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ. 

ADVERTISEMENT

2020ರಲ್ಲಿ ಇರಾನ್‌ನ ಇಸ್ಲಾಮಿಕ್‌ ರೆವೆಲ್ಯೂಷನರಿ ಗಾರ್ಡ್‌ನ ಕಮಾಂಡರ್‌ ಖಾಸಿಮ್‌ ಸೊಲೈಮಾನಿ ಅವರ ಹತ್ಯೆಗೆ ಪ್ರತಿಕಾರವಾಗಿ ಟ್ರಂಪ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಇರಾನ್‌ ಬಯಸಿದೆ ಎಂಬ ಮಾಹಿತಿ ಗುಪ್ತಚರಕ್ಕೆ ದೊರೆತಿದ್ದು, ಆ ಬಗ್ಗೆ ನಿಗಾವಹಿಸಲಾಗಿದೆ ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿ ತಿಳಿಸಿದೆ.

ನಮ್ಮ ಪಾತ್ರವಿಲ್ಲ: ಇರಾನ್‌

ಟೆಹ್ರಾನ್‌: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹತ್ಯೆಯ ಯತ್ನದಲ್ಲಿ ತನ್ನ ಯಾವುದೇ ಪಾತ್ರ ಇಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ.  ಟ್ರಂಪ್‌ ಅವರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಇರಾನ್‌ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಇರಾನ್‌ ವಿದೇಶಾಂಗ ಸಚಿವಾಲಯದ ವಕ್ತಾರ ನಾಸೀರ್‌ ಕಣಾನಿ ತಳ್ಳಿಹಾಕಿದ್ದಾರೆ.

‘ಹುತಾತ್ಮ ಜನರಲ್‌ ಖಾಸಿಂ ಸೊಲೈಮಾನಿ ಅವರ ಹತ್ಯೆಯ ಅಪರಾಧಕ್ಕೆ ಸಂಬಂಧಿಸಿದಂತೆ ಟ್ರಂಪ್ ವಿರುದ್ಧ ಇರಾನ್‌ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ’ ಎಂದು ಕಣಾನಿ ಹೇಳಿದ್ದಾರೆ. ಇರಾನ್‌ ವಿರುದ್ಧದ ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಅಮೆರಿಕದಲ್ಲಿರುವ ಇರಾನ್‌ ರಾಯಭಾರಿ ಅಮೀರ್‌ ಸಯೀದ್‌ ಇರಾವಾನಿ ಪ್ರತಿಕ್ರಿಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.