ವಾಷಿಂಗ್ಟನ್: ವರ್ಷದ ಹಿಂದೆ ಹ್ಯೂಸ್ಟನ್‌ಲ್ಲಿ ಕರ್ತವ್ಯದಲ್ಲಿದ್ದಾಗ ಹತ್ಯೆಯಾದ ಸಿಖ್ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ್ ಅವರ ಹೆಸರನ್ನು ಟೆಕ್ಸಾಸ್ ಅಂಚೆ ಕಚೇರಿಗೆ ನಾಮಕರಣ ಮಾಡುವ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಸಹಿ ಹಾಕಿದ್ದಾರೆ.
ಭಾರತದಲ್ಲಿ ಹುಟ್ಟಿದ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಧಲಿವಾಲ್, ಕೆಲವು ವರ್ಷಗಳ ಹಿಂದೆ ತಮ್ಮ ಪೋಷಕರೊಂದಿಗೆ ಹ್ಯೂಸ್ಟನ್‌ನಲ್ಲಿ ಬಂದು ನೆಲೆಸಿದ್ದರು. ಕಳೆದ ವರ್ಷ ಸೆಪ್ಟೆಂಬರ್ 27ರಂದು ಟೆಕ್ಸಾಸ್‌ನ ಹ್ಯೂಸ್ಟನ್ ನಲ್ಲಿ ಸಂಚಾರ ನಿಲುಗಡೆ ಸ್ಥಳದಲ್ಲಿ ಕರ್ತವ್ಯನಿರತರಾಗಿದ್ದ ಸಂದೀಪ್‌ರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.
ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿರುವ 315 ಅಡ್ಡಿಕ್ಸ್ ಹೋವೆಲ್ ರಸ್ತೆಯ ಅಂಚೆ ಕಚೇರಿಗೆ ‘ಡೆಪ್ಯುಟಿ ಸಂದೀಪ್ ಸಿಂಗ್ ಧಲಿವಾಲ್ ಅಂಚೆ ಕಚೇರಿ ಕಟ್ಟಡ‘ ಎಂದು ಹೆಸರಿಡುವಎಚ್‌ಆರ್ 5137 ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.
ಅಮೆರಿಕದಲ್ಲಿ ಅಂಚೆ ಕಚೇರಿಯೊಂದಕ್ಕೆ ಭಾರತೀಯ–ಅಮೆರಿಕನ್ ಹೆಸರಿಟ್ಟಿರುವ ಎರಡನೇ ಪ್ರಕರಣ ಇದಾಗಿದೆ. ಈ ಮೊದಲು 2006ರಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಂಚೆ ಕಚೇರಿಯೊಂದಕ್ಕೆ ಭಾರತೀಯ –ಅಮೆರಿಕನ್ ಸಂಸದ ದಲೀಪ್ ಸಿಂಗ್ ಸೌಂದ್ ಅವರ ಹೆಸರನ್ನು ಇಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.