ವಾಷಿಂಗ್ಟನ್, ಪ್ಯಾರಿಸ್, ಲಂಡನ್: ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ನೀಡಿರುವ ಹೇಳಿಕೆಗೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.
‘ಸೌದಿ ಹೇಳಿಕೆ ತೃಪ್ತಿ ತಂದಿಲ್ಲ. ಅದು ಸುಳ್ಳು ಹೇಳುತ್ತಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಿಳಿಸಿದ್ದಾರೆ.
‘ಆದರೆ, ಇದೇ ಕಾರಣಕ್ಕಾಗಿ ಸೌದಿ ಅರೇಬಿಯಾ ಜತೆಗೆ 110 ಬಿಲಿಯನ್ ಡಾಲರ್ (₹8 ಲಕ್ಷ ಕೋಟಿ) ಶಸ್ತ್ರಾಸ್ತ್ರ ಒಪ್ಪಂದವನ್ನು ರದ್ದುಗೊಳಿಸುವುದಿಲ್ಲ. ಶಸ್ತ್ರಾಸ್ತ್ರ ಒಪ್ಪಂದ ರದ್ದುಪಡಿಸಿದರೆ ಅಮೆರಿಕಕ್ಕೆ ಹೆಚ್ಚು ನಷ್ಟವಾಗಲಿದೆ’ ಎಂದು ತಿಳಿಸಿದ್ದಾರೆ.
’ಒಪ್ಪಂದ ರದ್ದತಿಯಿಂದ ಲಕ್ಷಾಂತರ ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ಇದು ಅಮೆರಿಕಕ್ಕೆ ಸಹಕಾರಿಯಾಗುವುದಿಲ್ಲ. ಹೀಗಾಗಿ, ಪರ್ಯಾಯ ಕ್ರಮಗಳ ಬಗ್ಗೆ ಯೋಚಿಸಬೇಕಾಗಿದೆ. ಸೌದಿ ಅರೇಬಿಯಾ ವಿರುದ್ಧ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳುವಾಗ ಸಂಸತ್ ಅನ್ನು ಸಹ ಭಾಗಿಯಾಗಿ ಮಾಡಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.
’ಸೌದಿ ಅರೇಬಿಯಾ ಅಮೆರಿಕದ ಪ್ರಮುಖ ಮಿತ್ರ ರಾಷ್ಟ್ರವಾಗಿದೆ. ಅಮೆರಿಕದಲ್ಲಿ ಅದು ಅಪಾರ ಹೂಡಿಕೆ ಮಾಡಿದೆ. ಇಂಧನ ಪೂರೈಕೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಅದು ಎರಡನೇ ಸ್ಥಾನದಲ್ಲಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಮುಂದಿನ ಕ್ರಮದ ಕುರಿತು ಯೋಚಿಸಬೇಕಾಗಿದೆ’ ಎಂದು ತಿಳಿಸಿದ್ದಾರೆ.
‘ಜಮಾಲ್ ಹತ್ಯೆ ಬಗ್ಗೆ ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಹೆಚ್ಚಿನ ವಿಷಯ ಗೊತ್ತಿಲ್ಲದಿರುವ ಸಾಧ್ಯತೆಗಳಿವೆ’ ಎಂದು ತಿಳಿಸಿದ್ದಾರೆ.
ಖಶೋಗ್ಗಿ ಹತ್ಯೆ ಕುರಿತು ಸಂಪೂರ್ಣ ಸತ್ಯ ಹೊರಬರಬೇಕಾಗಿದೆ. ಇದಕ್ಕಾಗಿ, ಸಮಗ್ರ ಮತ್ತು ಪಾರದರ್ಶಕವಾದ ತನಿಖೆ ನಡೆಯಬೇಕು ಎಂದು ಫ್ರಾನ್ಸ್ ಒತ್ತಾಯಿಸಿದೆ.
‘ಈ ಪ್ರಕರಣದ ಕುರಿತು ತನಿಖೆಯನ್ನು ಯಾವ ರೀತಿ ಕೈಗೊಳ್ಳಲಾಗುತ್ತದೆ ಮತ್ತು ಫಲಿತಾಂಶ ಹೇಗೆ ಬರುತ್ತದೆ ಎನ್ನುವುದರ ಮೇಲೆ ದ್ವಿಪಕ್ಷೀಯ ಸಂಬಂಧಗಳು ಅವಲಂಬಿತವಾಗಿವೆ’ ಎಂದು ಫ್ರಾನ್ಸ್ ಹಣಕಾಸು ಸಚಿವ ಬ್ರುನೋ ಲೆ ಮೈರೆ ತಿಳಿಸಿದ್ದಾರೆ.
ವಿಶ್ವಾಸಾರ್ಹತೆ ಹೊಂದಿಲ್ಲ: ಖಶೋಗ್ಗಿ ಹತ್ಯೆ ಕುರಿತು ಸೌದಿ ಅರೇಬಿಯಾದ ಹೇಳಿಕೆ ವಿಶ್ವಾಸಾರ್ಹವಾಗಿಲ್ಲ ಎಂದು ಬ್ರಿಟನ್ ತಿಳಿಸಿದೆ.
‘ಖಶೋಗ್ಗಿ ಹತ್ಯೆ ಬಗ್ಗೆ ಹಲವು ಪ್ರಶ್ನೆಗಳಿವೆ. ಟರ್ಕಿ ಸರ್ಕಾರ ಕೈಗೊಳ್ಳುವ ತನಿಖೆಯನ್ನು ಬೆಂಬಲಿಸುತ್ತೇವೆ’ ಎಂದು ಬ್ರೆಕ್ಸಿಟ್ ಕಾರ್ಯದರ್ಶಿ ಡೊಮಿನಿಕ್ ರಾಬ್ ತಿಳಿಸಿದ್ದಾರೆ.
ಟೀಕಾಕಾರರ ವಿರುದ್ಧ ಆನ್‌ಲೈನ್ ಪಡೆ
ಪತ್ರಕರ್ತ ಜಮಾಲ್ ಖಶೋಗ್ಗಿ ಮತ್ತು ಇತರ ಟೀಕಾಕಾರರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಿರುಗೇಟು ನೀಡಲು ಸೌದಿ ಅರೇಬಿಯಾ ಆನ್‌ಲೈನ್ ಪಡೆಯನ್ನೇ ನಿಯೋಜಿಸಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅದರಲ್ಲೂ ಪ್ರಮುಖವಾಗಿ ಟ್ವಿಟರ್ ಮೂಲಕವೇ ಹೆಚ್ಚು ಪ್ರತಿಕ್ರಿಯೆ ನೀಡಲಾಗುತ್ತಿತ್ತು. ಟೀಕಾಕಾರರ ಖಾತೆಗಳ ಮೇಲೆ ನಿರಂತರವಾಗಿ ನಿಗಾವಹಿಸಲಾಗುತ್ತಿತ್ತು ಎಂದು ತಿಳಿಸಿದೆ. 2010ರಿಂದ ಈ ರೀತಿಯ ಪಡೆಯನ್ನು ನಿಯೋಜಿಸಿ ಟೀಕಾಕಾರರಿಗೆ ಕಿರುಕುಳ ನೀಡಲು ಸೌದಿ ಅರೇಬಿಯಾ ಆರಂಭಿಸಿತು. ಇದಕ್ಕಾಗಿಯೇ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಲಹೆಗಾರ ಸೌದ್ ಅಲ್ ಖಹ್ತಾನಿ ಕಾರ್ಯತಂತ್ರವನ್ನು ರೂಪಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹತ್ಯೆಗೆ ಹೊಸ ತಿರುವು
ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಕುರಿತು ಅಧಿಕಾರಿಯೊಬ್ಬರು ವಿಭಿನ್ನ ಹೇಳಿಕೆ ನೀಡಿದ್ದು, ಇದು ಹೊಸ ತಿರುವು ಪಡೆದಿದೆ.
‘ಅಕ್ಟೋಬರ್ 2ರಂದು ಖಶೋಗ್ಗಿ ಜತೆ ಗಲಾಟೆ ನಡೆಸಲು ಸೌದಿ ಅರೇಬಿಯಾದ 15 ಮಂದಿಯನ್ನು ಕಳುಹಿಸಲಾಗಿತ್ತು. ಮಾದಕ ದ್ರವ್ಯವನ್ನು ಒತ್ತಾಯದಿಂದ ನೀಡಿ ಅಪಹರಣ ಮಾಡುವುದಾಗಿ ಇವರು ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಖಶೋಗ್ಗಿಯನ್ನು ಹತ್ಯೆ ಮಾಡಿದ್ದಾರೆ. ಬಳಿಕ, ಇವರಲ್ಲೊಬ್ಬ ಖಶೋಗ್ಗಿಯ ಬಟ್ಟೆ ಧರಿಸಿ ಕನ್ಸಲೇಟ್ ಕಚೇರಿಯಿಂದ ಹೊರಗೆ ಹೋಗಿದ್ದಾರೆ. ಈ ಮೂಲಕ ಖಶೋಗಿಯೇ ಕಚೇರಿಯಿಂದ ಹೊರ ಹೋಗಿದ್ದಾರೆ ಎಂದು ಭಾವಿಸಿಕೊಳ್ಳಬೇಕು ಎನ್ನುವುದು ಇವರ ಉದ್ದೇಶವಾಗಿತ್ತು’ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ರೀತಿ ಅನುಮಾನಗಳು ಮೂಡಿರುವ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ. ಇದರಿಂದ, ಖಶೋಗ್ಗಿ ಅವರಿಗೆ ಚಿತ್ರಹಿಂಸೆ ನೀಡಿಯೇ ಹತ್ಯೆ ಮಾಡಲಾಗಿತ್ತು ಎನ್ನುವುದು ದಟ್ಟವಾಗಿದೆ. ಈ ಮೊದಲು ಖಶೋಗ್ಗಿ ಇಸ್ತಾನ್‌ಬುಲ್‌ನ ಸೌದಿ ಅರೇಬಿಯಾದ ಕಾನ್ಸಲೇಟ್ ಕಚೇರಿಯಲ್ಲಿ ಅಧಿಕಾರಿಗಳ ಜತೆ ವಾಗ್ವಾದ ನಡೆದ ಬಳಿಕ ಗಲಾಟೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.