ವಾಷಿಂಗ್ಟನ್: ಇ ಅಂಚೆ ಮತದಾನ (ಮೇಲ್ ಇನ್ ವೋಟಿಂಗ್) ಬಗ್ಗೆ ತಾವು ಮಾಡಿದ್ದ ಎರಡು ಟ್ವೀಟ್‌ಗಳ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಟ್ವಿಟರ್ ಸಂಸ್ಥೆಯ ವಿರುದ್ಧ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ವಿಟರ್ ಅನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇ ಅಂಚೆ ಮತದಾನ ನಡೆಸುವ ಕ್ಯಾಲಿಫೋರ್ನಿಯಾದ ಗವರ್ನರ್ ತೀರ್ಮಾನವನ್ನು ಟ್ವಿಟರ್ ಮೂಲಕ ಪ್ರಶ್ನೆ ಮಾಡಿದ್ದ ಡೊನಾಲ್ಡ್ ಟ್ರಂಪ್, ಇದು ಚುನಾವಣಾ ಅಕ್ರಮಕ್ಕೆ ಕಾರಣವಾಗುತ್ತದೆ ಎಂದಿದ್ದರು. ಟ್ರಂಪ್ ಅವರ ಈ ಟ್ವೀಟ್‌ಗಳನ್ನು ಸಿಎನ್‌ಎನ್ ವರದಿ ಉಲ್ಲೇಖಿಸಿ ಟ್ವಿಟರ್ ಫ್ಯಾಕ್ಟ್ ಚೆಕ್ ಮಾಡಿದೆ. ಟ್ರಂಪ್ ಅವರ ಟ್ವೀಟ್‌ನ ಅಡಿಯಲ್ಲೇ ಫ್ಯಾಕ್ಟ್ ಚೆಕ್‌ನ ಲಿಂಕ್ ಅನ್ನೂ ಸೇರಿಸಿರುವ ಟ್ವಿಟರ್, ಟ್ರಂಪ್ ಅವರ ಹೇಳಿಕೆಯು ಸತ್ಯಕ್ಕೆ ದೂರವಾದದ್ದು ಎಂದು ಅದು ಹೇಳಿತ್ತು.
ಇದರಿಂದ ಕೆರಳಿರುವ ಡೊನಾಲ್ಡ್ ಟ್ರಂಪ್, ‘ಟ್ವಿಟರ್ ಸಂಸ್ಥೆಯು ಅಮೆರಿಕ ಅಧ್ಯಕ್ಷೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ನನ್ನ ಭಾಷಣವನ್ನು ಕಟ್ಟಿ ಹಾಕುವ ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ನಾನು ಇದಕ್ಕೆ ಅವಕಾಶ ನೀಡುವುದಿಲ್ಲ,’ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ಟ್ವಿಟರ್ ಅನ್ನು ಅಮೆರಿಕದಲ್ಲಿ ನಿಷೇಧಿಸುವ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದಾರೆ.
‘ಟ್ವಿಟರ್ ಅನ್ನು ನಾವು ಕಠಿಣವಾಗಿ ನಿಯಂತ್ರಿಸುತ್ತೇವೆ. ನಿಷೇಧಿಸುತ್ತೇವೆ. ಟ್ವಿಟರ್‌ನಿಂದ ಇದೇ ರೀತಿಯ ಪ್ರಯತ್ನಗಳು 2016ರ ಚುನಾವಣೆಗಳಲ್ಲೂ ನಡೆದಿತ್ತು. ನಿಮ್ಮ ನಡೆಯನ್ನು ಸರಿಪಡಿಸಿಕೊಳ್ಳಿ,’ ಎಂದು ಟ್ರಂಪ್ ಎಚ್ಚರಿಕೆ ರವಾನಿಸಿದ್ದಾರೆ. ಅಲ್ಲದೆ, ತಾವು ಇ ಅಂಚೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.