ವಾಷಿಂಗ್ಟನ್: ಜನಾಂಗೀಯ ದ್ವೇಷದ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆಗಳು ವ್ಯಾಪಕವಾಗಿರುವ ನಡುವೆಯೇ ಅದಕ್ಕೆ ತುಪ್ಪ ಸುರಿಯಬಹುದಾದ ವಿಡಿಯೊವೊಂದನ್ನು ರೀಟ್ವೀಟ್ ಮಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿರೋಧ ವ್ಯಕ್ತವಾಗುವುದಕ್ಕೂ ಮೊದಲೇ ಎಚ್ಚೆತ್ತುಕೊಂಡು ಅದನ್ನು ಡಿಲೀಟ್ ಕೂಡ ಮಾಡಿದ್ದಾರೆ.
ತಮ್ಮನ್ನು ಬೆಂಬಲಿಸುವವರು ಮತ್ತು ವಿರೋಧಿಸುವರನ್ನು ಒಳಗೊಂಡ ವಿಡಿಯೊವೊಂದನ್ನು ಟ್ರಂಪ್ ಟ್ವಿಟರ್‌ನಲ್ಲಿ ರೀಟ್ವೀಟ್ ಮಾಡಿದ್ದರು. ‘ಹಳ್ಳಿಯ ಈ ಮಹಾ ಜನರಿಗೆ ಧನ್ಯವಾದಗಳು. ಎಡ ಸಿದ್ಧಾಂತವಾದಿಗಳು ಡೆಮಕ್ರಟ್‌ಗಳನ್ನು ಏನೂ ಮಾಡಲಾಗದು. ಅವರು ಕೆಳಗೆ ಬೀಳಲಿದ್ದಾರೆ,’ ಎಂಬ ಒಕ್ಕಣೆಯೊಂದಿಗೆ ವಿಡಿಯೊ ಹಂಚಿಕೊಂಡಿದ್ದರು.
ಫ್ಲೋರಿಡಾದ ಹಳ್ಳಿಯೊಂದರ ನಿವೃತ್ತರ ಸಮುದಾಯದಲ್ಲಿ ಚಿತ್ರೀಕರಿಸಲಾಗಿದ್ದು ಎನ್ನಲಾದ ವಿಡಿಯೊದಲ್ಲಿ ‘ಟ್ರಂಪ್ 2020’ ಮತ್ತು ‘ಅಮೆರಿಕ ಫಸ್ಟ್’ ಎಂಬುದರ ಚಿಹ್ನೆಯುಳ್ಳ ವಾಹನವೊಂದನ್ನು ಓಡಿಸುತ್ತಿರುವ ವ್ಯಕ್ತಿ ‘ಬಿಳಿಯರ ಶಕ್ತಿ’ ಎಂದು ಘೋಷಣೆ ಕೂಗುತ್ತಾರೆ. ಅದೇ ವಿಡಿಯೊದಲ್ಲಿ ಜನಾಂಗೀಯ ದ್ವೇಷದ ವಿರುದ್ಧ ಹೋರಾಡುತ್ತಿರುವವರು ‘ರೇಸಿಸ್ಟ್,’ ‘ನಾಜಿ’ ಎಂದು ಘೋಷಣೆ ಕೂಗುವುದನ್ನು ತೋರಿಸಲಾಗಿತ್ತು ಎನ್ನಲಾಗಿದೆ.
ವಿಡಿಯೊ ರೀಟ್ವೀಟ್ ಮಾಡಿದ ಕೆಲವೇ ಹೊತ್ತಲ್ಲೇ ಅದನ್ನು ಡಿಲೀಟ್ ಮಾಡಲಾಗಿದೆ. ಟ್ರಂಪ್ ಬೆಂಬಲಿಗ ‘ಬಿಳಿಯರ ಶಕ್ತಿ’ ಎಂದು ಘೋಷಣೆ ಕೂಗಿದ್ದನ್ನು ಟ್ರಂಪ್ ಅವರು ಗಮನಿಸಿರಲಿಲ್ಲ ಎಂದೂ ವೈಟ್ ಹೌಸ್ ಸ್ಪಷ್ಟನೆಯನ್ನೂ ಕೊಟ್ಟಿದೆ.
ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ರಿಪಬ್ಲಿಕನ್ ಪಕ್ಷದ ಸಂಸದ ಟಿಮ್ ಸ್ಕಾಟ್, ‘ಟ್ರಂಪ್ ಆ ವಿಡಿಯೊವನ್ನು ರೀಟ್ವೀಟ್ ಮಾಡಬಾರದಿತ್ತು ಮತ್ತು ಅದನ್ನು ಡಿಲೀಟ್ ಮಾಡಬೇಕಿತ್ತು,’ ಎಂಬುದರಲ್ಲಿ ಪ್ರಶ್ನೆಯೇ ಇಲ್ಲ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.