ADVERTISEMENT

ಅಮೆರಿಕ ಅಧ್ಯಕ್ಷರಾಗಲು ಟ್ರಂಪ್ ಅನರ್ಹ: ಕಮಲಾ ಹ್ಯಾರಿಸ್ ಕಿಡಿ

ಪಿಟಿಐ
Published 24 ಅಕ್ಟೋಬರ್ 2024, 4:20 IST
Last Updated 24 ಅಕ್ಟೋಬರ್ 2024, 4:20 IST
<div class="paragraphs"><p>ಡೊನಾಲ್ಡ್ ಟ್ರಂಪ್,&nbsp;ಕಮಲಾ ಹ್ಯಾರಿಸ್</p></div>

ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ತೀವ್ರ ವಾಗ್ದಾಳಿ ನಡೆಸಿದ್ದು, ದೇಶವನ್ನು ಮುನ್ನಡೆಸಲು ಟ್ರಂಪ್ ಅನರ್ಹ ಎಂದು ಹೇಳಿದ್ದಾರೆ.

ADVERTISEMENT

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ, ಅಡಾಲ್ಫ್ ಹಿಟ್ಲರ್‌ನಂತಹ ಜನರಲ್‌ಗಳು ತನಗೆ ಬೇಕು ಎಂದು ಬಯಸಿದ್ದರು ಎಂಬುದಾಗಿ ಅವರ ಆಡಳಿತದಲ್ಲಿದ್ದ ಸಿಬ್ಬಂದಿ ವಿಭಾಗದ ಮುಖ್ಯಸ್ಥ, ನಿವೃತ್ತ ಜನರಲ್ ಜಾನ್ ಕೆಲ್ಲಿ ಹೇಳಿರುವುದಾಗಿ ಕಮಲಾ ಆರೋಪಿಸಿದ್ದಾರೆ.

ಅಮೆರಿಕದ ಸಂವಿಧಾನಕ್ಕೆ ನಿಷ್ಠವಾಗಿರುವ ಮಿಲಿಟರಿ ಟ್ರಂಪ್ ಅವರಿಗೆ ಬೇಕಿರಲಿಲ್ಲ. ತನಗೆ ನಿಷ್ಠವಾಗಿರುವ ಮಿಲಿಟರಿಯನ್ನು ಅವರು ಬಯಸಿದ್ದರು. ಕಾನೂನನ್ನು ಮುರಿದಾದರೂ ಅಥವಾ ಸಂವಿಧಾನದಡಿ ತೆಗೆದುಕೊಂಡ ಪ್ರಮಾಣವನ್ನು ಮೀರಿ ತಾವು ನೀಡಿದ ಆದೇಶ ಪಾಲಿಸಬೇಕೆಂದು ಬಯಸುತ್ತಿದ್ದರು ಎಂಬುದಾಗಿ ತಮ್ಮ ಅಧಿಕೃತ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಮಲಾ ಹ್ಯಾರಿಸ್ ಆರೋಪಿಸಿದ್ದಾರೆ.

‘ಕಳೆದ ಕೆಲ ವಾರಗಳ ಹಿಂದಷ್ಟೇ, ದೇಶದ ಗೌರವಾನ್ವಿತ ಜನರನ್ನು ಉದ್ದೇಶಿಸಿ ಶತ್ರುಗಳು ದೇಶದ ಒಳಗೆ ಇದ್ದಾರೆ ಎಂದು ಪದೇ ಪದೇ ಹೇಳಿದ್ದರು. ತನ್ನನ್ನು ವಿರೋಧಿಸುವವರ ವಿರುದ್ಧವೇ ಸೇನೆ ಬಳಸುವುದಾಗಿ ಹೇಳಿದ್ದಾರೆ’ ಎಂದು ಕಮಲಾ ಕಿಡಿ ಕಾರಿದ್ದಾರೆ.

ಟ್ರಂಪ್ ಅಡಿಯಲ್ಲಿ ಕೆಲಸ ಮಾಡಿದ್ದ ಮಾಜಿ ಹಿರಿಯ ಅಧಿಕಾರಿ ಕೆಲ್ಲಿ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಹ್ಯಾರಿಸ್ ಸುದ್ದಿಗೋಷ್ಠಿ ನಡೆಸಿದ್ದಾರೆ.

‘ಮಾಜಿ ಅಧ್ಯಕ್ಷ ಟ್ರಂಪ್ ನ್ಯಾಯಯುತ ಹಾದಿಯಿಂದ ಬಹಳ ದೂರವಿದ್ದಾರೆ. ಖಂಡಿತವಾಗಿಯೂ ಅವರೊಬ್ಬ ನಿರಂಕುಶಾಧಿಕಾರಿ, ಸರ್ವಾಧಿಕಾರಿಗಳನ್ನು ಸ್ತುತಿಸುವ ವ್ಯಕ್ತಿ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಫ್ಯಾಸಿಸ್ಟ್ ಸಿದ್ದಾಂತದ ಅಡಿ ಅವರು ಬರುತ್ತಾರೆ’ಎಂದು ಕೆಲ್ಲಿ ನ್ಯೂಯಾರ್ಕ್ ಟೈಮ್ಸ್ ಸಂದರ್ಶನದಲ್ಲಿ ಹೇಳಿದ್ದಾರೆ.

‘ಟ್ರಂಪ್ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ಸರ್ಕಾರದಲ್ಲಿ ಸರ್ವಾಧಿಕಾರಿ ವಿಧಾನಕ್ಕೆ ಆದ್ಯತೆ ನೀಡುತ್ತಾರೆ. ತಾನು ಬಯಸಿದ ಯಾವುದೇ ಕೆಲಸವನ್ನಾದರೂ, ಯಾವಾಗ ಬೇಕಾದರೂ ಮಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ನಾನಲ್ಲ ಎಂಬ ಸತ್ಯವನ್ನು ಎಂದಿಗೂ ಅವರು ಒಪ್ಪಿಕೊಂಡಿಲ್ಲ’ಎಂದು ಕೆಲ್ಲಿ ದೂರಿದ್ದರು.

ಈ ಆರೋಪಗಳನ್ನು ತಳ್ಳಿಹಾಕಿರುವ ಟ್ರಂಪ್, ಸಂಪೂರ್ಣ ಹೆಸರು ಹಾಳುಮಾಡಿಕೊಂಡಿರುವ ಕೆಲ್ಲಿ, ನನ್ನ ವಿರುದ್ಧ ದ್ವೇಷದಿಂದ ಕಟ್ಟು ಕಥೆಯನ್ನು ಹೇಳಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಈ ವ್ಯಕ್ತಿಗೆ ಎರಡು ಗುಣಗಳಿವೆ. ಒಗ್ಗೂಡಿ ಕೆಲಸ ಮಾಡದಿರುವುದು ಮತ್ತು ಗಟ್ಟಿತನ. ಸಮಸ್ಯೆಯೆಂದರೆ, ಅವರ ಗಟ್ಟಿತನವು ದೌರ್ಬಲ್ಯವಾಗಿ ಮಾರ್ಪಟ್ಟಿದೆ. ಅವರು ಹೇಳಿದ ಹಲವು ಕಥೆಗಳಂತೆ ಸೈನಿಕರ ಕುರಿತಾದ ಕಥೆಯು ಒಂದು ಸುಳ್ಳು. ನಾನು ಅವರ ಬಗ್ಗೆ ಮಾತನಾಡುತ್ತ ಸಮಯವನ್ನು ವ್ಯರ್ಥ ಮಾಡಲು ಬಯಸದಿದ್ದರೂ, ಸತ್ಯವನ್ನು ಬಹಿರಂಗಪಡಿಸಲು ಪ್ರತಿಕ್ರಿಯೆ ಅನಿವಾರ್ಯ’ಎಂದು ಟ್ರಂಪ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.