ADVERTISEMENT

ಮತ್ತೊಂದು ಅವಧಿಗೆ ಅಧ್ಯಕ್ಷನಾದರೆ ಕ್ರಿಪ್ಟೊ ಕರೆನ್ಸಿ ಸ್ನೇಹಿ ನೀತಿ ಜಾರಿ: ಟ್ರಂಪ್

ಅಮೆರಿಕ ‘ಬಿಟ್‌ ಕಾಯಿನ್‌ ಸೂಪರ್‌ಪವರ್’ ಆಗಲಿದೆ: ಟ್ರಂಪ್

ಪಿಟಿಐ
Published 28 ಜುಲೈ 2024, 12:50 IST
Last Updated 28 ಜುಲೈ 2024, 12:50 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್‌: 'ಮತ್ತೊಂದು ಅವಧಿಗೆ ಅಧ್ಯಕ್ಷನಾಗಿ ಆಯ್ಕೆಯಾದರೆ ಅಮೆರಿಕವನ್ನು ‘ಬಿಟ್‌ ಕಾಯಿನ್‌ ಸೂಪರ್‌ಪವರ್’ ಮಾಡುತ್ತೇನೆ' ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಘೋಷಿಸಿದ್ದಾರೆ. 

ಬಿಟ್‌ ಕಾಯಿನ್‌ಗೆ ಸಂಬಂಧಿಸಿದಂತೆ ಶನಿವಾರ ನಡೆದ ಸಮಾವೇಶದಲ್ಲಿ ಪಾಲ್ಗೊಂಡ ಅವರು ಕ್ರಿಪ್ಟೊ ಕರೆನ್ಸಿ ಸ್ನೇಹಿ ನೀತಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು. 

‘ಅಮೆರಿಕವನ್ನು ಕ್ರಿಪ್ಟೊ ಕರೆನ್ಸಿಯ ರಾಜಧಾನಿ ಮತ್ತು ಬಿಟ್‌ಕಾಯಿನ್ ಸೂಪರ್ ಪವರ್ ಆಗಿ ಮಾಡಲು ಯೋಜನೆ ರೂಪಿಸುತ್ತೇನೆ’ ಎಂದು ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ, 78 ವರ್ಷದ ಟ್ರಂಪ್‌ ಹೇಳಿದರು.

ADVERTISEMENT

ಬಿಟ್ ಕಾಯಿನ್ ಎಂಬುದು ವಿಶ್ವದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಕ್ರಿಪ್ಟೊ ಕರೆನ್ಸಿಯಾಗಿದ್ದು, ಇದು ಆನ್‌ಲೈನ್‌ ಮೂಲಕ ಸುರಕ್ಷಿತ ಮತ್ತು ತಡೆರಹಿತ ವಹಿವಾಟಿಗೆ ಅವಕಾಶ ಕಲ್ಪಿಸುತ್ತದೆ.

'ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ಬಿಟ್‌ ಕಾಯಿನ್‌ ಹೂಡಿಕೆದಾರರು ನಷ್ಟ ಅನುಭವಿಸಲಿದ್ದಾರೆ' ಎಂದು ಟ್ರಂಪ್‌ ಇದೇ ವೇಳೆ ಎಚ್ಚರಿಸಿದರು.

‘ಅವರು (ಡೆಮಾಕ್ರಟಿಕ್‌ ಪಕ್ಷದವರು) ಬಿಗಿಯಾದ ನೀತಿಗಳನ್ನು ತಂದು ನಿಮ್ಮ ಉಸಿರುಗಟ್ಟುವಂತೆ ಮಾಡಲಿದ್ದಾರೆ. ಕ್ರಿಪ್ಟೊ ಕರೆನ್ಸಿ ವ್ಯವಹಾರದಿಂದ ನಿಮ್ಮನ್ನು ಹೊರಹಾಕಲು ಬಯಸುತ್ತಾರೆ. ಬಿಟ್‌ಕಾಯಿನ್‌ಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಈಗ ಇರುವ ನಿಯಮಗಳು ಅಸ್ಪಷ್ಟ ಮತ್ತು ಕಠಿಣವಾಗಿವೆ. ಅವುಗಳನ್ನು ಸರಳಗೊಳಿಸುತ್ತೇವೆ. ಬಿಟ್‌ ಕಾಯಿನ್‌ಗೆ ಸಂಬಂಧಿಸಿದ ಉದ್ಯೋಗ ಮತ್ತು ವ್ಯವಹಾರ ಇತರ ದೇಶಗಳ ಪಾಲಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

‘ಬಿಟ್‌ಕಾಯಿನ್ ಮತ್ತು ಕ್ರಿಪ್ಟೊಗೆ ಸಂಬಂಧಿಸಿದಂತೆ ಅಧ್ಯಕ್ಷೀಯ ಸಲಹಾ ಮಂಡಳಿ’ಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದ ಅವರು, ಈ ಮಂಡಳಿಯು ಕ್ರಿಪ್ಟೊ ಕರೆನ್ಸಿ ವಹಿವಾಟನ್ನು ಪಾರದರ್ಶಕವಾಗಿಸಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.