ADVERTISEMENT

ಅಧ್ಯಕ್ಷನಾದರೆ ಭಾರತದ ಉತ್ಪನ್ನಗಳ ಮೇಲೂ ದುಬಾರಿ ತೆರಿಗೆಯ ಎಚ್ಚರಿಕೆ ನೀಡಿದ ಟ್ರಂಪ್

ಪಿಟಿಐ
Published 21 ಆಗಸ್ಟ್ 2023, 7:39 IST
Last Updated 21 ಆಗಸ್ಟ್ 2023, 7:39 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   ರಾಯಿಟರ್ಸ್‌ ಚಿತ್ರ

ವಾಷಿಂಗ್ಟನ್: ಅಮೆರಿಕದ ಉತ್ಪನ್ನಗಳ ಮೇಲೆ ಭಾರತದಲ್ಲಿ ಅತ್ಯಧಿಕ ತೆರಿಗೆ ವಿಧಿಸಲಾಗುತ್ತಿದೆ ಎಂದು ಗುಡುಗಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಅಮೆರಿಕದಲ್ಲಿರುವ ಭಾರತೀಯ ಉತ್ಪನ್ನಗಳ ಮೇಲೂ ಅದೇ ಮಾದರಿಯ ತೆರಿಗೆ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಫಾಕ್ಸ್‌ ಬ್ಯುಸಿನೆಸ್‌ ನ್ಯೂಸ್‌ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 

‘ನಮ್ಮ ಉತ್ಪನ್ನಗಳ ಮೇಲೆ ಭಾರತವು ಭಾರೀ ಪ್ರಮಾಣದ ತೆರಿಗೆ ವಿಧಿಸುತ್ತಿದೆ. ಹಾರ್ಲೆ ಡೇವಿಡ್‌ಸನ್ ಬೈಕ್‌ಗಳ ಮೇಲೆ ಭಾರತ ಹೇರುತ್ತಿರುವ ತೆರಿಗೆಗಳೇ ಇದಕ್ಕೊಂದು ಉತ್ತಮ ಉದಾಹರಣೆ. ಶೇ 100, ಶೇ 150 ಹಾಗು ಶೇ 200ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇಂಥದ್ದು ಭಾರತದಂತ ರಾಷ್ಟ್ರದಲ್ಲಿ ಹೇಗೆ ಆಗಲು ಸಾಧ್ಯ?’ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.

ADVERTISEMENT

‘ಹಾರ್ಲೆ ಅವರು ಭಾರತದಲ್ಲಿ ತಯಾರಾದ ಮೋಟಾರ್‌ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಭಾರತದಲ್ಲಿ ತಯಾರಾದ ಮೋಟಾರ್‌ ಬೈಕ್‌ಗಳು ಅಮೆರಿಕದಲ್ಲಿ ಯಾವುದೇ ತೆರಿಗೆ ಇಲ್ಲದೆ ಮಾರಾಟವಾಗುತ್ತಿವೆ. ಹಾಗಿದ್ದರೆ ಇಲ್ಲಿ ತಯಾರಾದ ಬೈಕ್‌ಗಳು ಭಾರತದಲ್ಲಿ ಏಕೆ ಮಾರಾಟವಾಗುತ್ತಿಲ್ಲ ಎಂದು ಕಂಪನಿಯನ್ನು ಕೇಳಿದೆ. ತೆರಿಗೆಯಿಂದಾಗಿ ವಾಹನದ ಬೆಲೆಯೂ ಅಧಿಕ. ಹೀಗಾಗಿ ಖರೀದಿ ಮಾಡುವವರು ಮುಂದೆ ಬರುತ್ತಿಲ್ಲ. ಭಾರತದಲ್ಲೇ ತಯಾರಿಕಾ ಘಟಕವನ್ನು ನಾವು ಆರಂಭಿಸಬೇಕು ಎಂಬುದು ಅವರ ಇಚ್ಛೆ ಎಂಬ ಉತ್ತರ ಅವರಿಂದ ಬಂತು’ ಎಂಬ ವಿಷಯವನ್ನು ಟ್ರಂಪ್ ಹಂಚಿಕೊಂಡಿದ್ದಾರೆ.

‘ಉಭಯ ದೇಶಗಳ ನಡುವಿನ ಮುಕ್ತ ಮಾರುಕಟ್ಟೆ ಒಪ್ಪಂದ ಇದಾಗಿರಲಿಲ್ಲ. ಇದು ನಿಜಕ್ಕೂ ಬೇಸರ. ಭಾರತ ನಮ್ಮ ಉತ್ಪನ್ನಗಳ ಮೇಲೆ ಶೇ 200ರಷ್ಟು ತೆರಿಗೆ ಹಾಕುತ್ತಿದ್ದರೆ, ನಾವು ಅವರ ಯಾವ ಉತ್ಪನ್ನಗಳ ಮೇಲೂ ತೆರಿಗೆ ವಿಧಿಸುತ್ತಿಲ್ಲ. ಹಾಗಿದ್ದರೆ ನಾವೇಕೆ ಶೇ 100ರಷ್ಟು ತೆರಿಗೆ ವಿಧಿಸಬಾರದು? ನಾವೂ ಹೆಚ್ಚಿನ ತೆರಿಗೆ ವಿಧಿಸುತ್ತೇವೆ’ ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ಮೊದಲ ಬಾರಿ ಅಧ್ಯಕ್ಷರಾಗಿದ್ದಾಗ ಭಾರತವನ್ನು ‘ಟ್ಯಾರಿಫ್‌ ಕಿಂಗ್‌’ ಎಂದು ಜರಿದಿದ್ದರು. ಅಮೆರಿಕದ ಉತ್ಪನ್ನಗಳಿಗೆ ಭಾರತ ಎಂದೂ ಸಮನಾದ ಹಾಗೂ ಸೂಕ್ತವಾದ ಮಾರುಕಟ್ಟೆಯನ್ನು ಒದಗಿಸಿಲ್ಲ’ ಎಂದು ಆರೋಪಿಸಿದ್ದಾರೆ. 2019ರ ಮೇನಲ್ಲಿ ಭಾರತದ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

77 ವರ್ಷದ ಟ್ರಂಪ್‌ ವಿರುದ್ಧ ಗಂಭೀರ ಆರೋಪ ಪ್ರಕರಣಗಳ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ರಾಷ್ಟ್ರದ ಪ್ರಮುಖ ಚುನಾವಣೆಯಲ್ಲಿ ಇವರು ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷವು ಹೆಚ್ಚು ಜಿಒಪಿ ಮತಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.