ADVERTISEMENT

ಟ್ರಂಪ್‌ ವಿರುದ್ಧದ ಹಳೆಯ ಪ್ರಕರಣಗಳಿಗೆ ಕೊಕ್‌?

ರಾಯಿಟರ್ಸ್
Published 6 ನವೆಂಬರ್ 2024, 23:41 IST
Last Updated 6 ನವೆಂಬರ್ 2024, 23:41 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ವಾಷಿಂಗ್ಟನ್‌: ಡೊನಾಲ್ಡ್ ಟ್ರಂಪ್‌ ಅವರು ಅಮೆರಿಕದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಟ್ರಂಪ್ ಶ್ವೇತಭವನ ಪ್ರವೇಶಿಸುವುದು ಸನ್ನಿಹಿತವಾಗುತ್ತಿರುವಂತೆಯೇ, ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ಕನಿಷ್ಠ ಪಕ್ಷ ನಾಲ್ಕು ವರ್ಷ ಸ್ಥಗಿತಗೊಳ್ಳುವುದು ಎನ್ನಲಾಗುತ್ತಿದೆ.

ಟ್ರಂಪ್‌ ಅವರು ಕ್ರಿಮಿನಲ್‌ ಆರೋಪಗಳಿಗೆ ಗುರಿಯಾಗಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ. ಅವರು  ನಾಲ್ಕು ಪ್ರಕರಣಗಳಲ್ಲಿ ವಿಚಾರಣೆ ಎದುರಿಸಿದ್ದಾರೆ.

2016ರಲ್ಲಿ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ತಮ್ಮ ಕಂಪನಿಯಿಂದ ಹಣ ವರ್ಗಾಯಿಸಿದ್ದು, 2020ರ ಚುನಾವಣೆಯ ಫಲಿತಾಂಶವನ್ನು ಬುಡಮೇಲು ಮಾಡಲು ಯತ್ನಿಸಿದ ಆರೋಪ ಸೇರಿದಂತೆ ಹಲವು ಪ್ರಕರಣಗಳು ಡೊನಾಲ್ಡ್‌ ಟ್ರಂಪ್‌ ವಿರುದ್ಧ ದಾಖಲಾಗಿವೆ.

ADVERTISEMENT

ಈ ಎಲ್ಲ ಪ್ರಕರಣಗಳಲ್ಲಿ ತಾವು ನಿರಪರಾಧಿ ಎಂದು ಪ್ರತಿಪಾದಿಸಿರುವ ಟ್ರಂಪ್‌, ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಹೇಳುತ್ತಾ ಬಂದಿದ್ದಾರೆ.

2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಟ್ರಂಪ್‌ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಜಾರ್ಜಿಯಾದ ಫುಲ್ಟನ್ ಕೌಂಟಿ ಜೈಲಿಗೆ ಶರಣಾಗಿದ್ದರು. ಆಗ ಅವರನ್ನು 22 ನಿಮಿಷಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು. ಬಳಿಕ ಬಾಂಡ್‌ ಮೇಲೆ ಬಿಡುಗಡೆ ಮಾಡಲಾಗಿತ್ತು.

ಹಷ್‌ ಮನಿ ಪ್ರಕರಣ: 2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ನೀಲಿಚಿತ್ರಗಳ ನಟಿಗೆ ಹಣ ನೀಡಿದ್ದ ಆರೋಪವನ್ನು ಟ್ರಂಪ್‌ ಎದುರಿಸುತ್ತಿದ್ದಾರೆ. 

ನಟಿ ಸ್ಟಾರ್ಮಿ ಡೇನಿಯಲ್ಸ್‌ ಅವರು ‘ನಾನು ಟ್ರಂಪ್‌ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ’ ಎಂದು ಹೇಳಿದ್ದರು. 2016ರ ಚುನಾವಣೆ ವೇಳೆ ಈ ಬಗ್ಗೆ ಹೇಳಿಕೆ ನೀಡದೇ ಮೌನವಹಿಸಲು ನಟಿಗೆ ದೊಡ್ಡ ಮೊತ್ತ ನೀಡಲಾಗಿತ್ತು ಎಂಬ ಕುರಿತು ದಾಖಲಾಗಿದ್ದ ಪ್ರಕರಣದಲ್ಲಿ, ಟ್ರಂಪ್‌ ದೋಷಿ ಎಂದು ನ್ಯಾಯಾಲಯ ಏಪ್ರಿಲ್‌ನಲ್ಲಿ ಹೇಳಿತ್ತು. ನಂತರ, ಟ್ರಂಪ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಬಿಡುಗಡೆ ಮಾಡಲಾಗಿತ್ತು.

ಚುನಾವಣಾ ಫಲಿತಾಂಶವನ್ನು ತಿರುಚಲು ಯತ್ನಿಸಿದ್ದರು ಹಾಗೂ ಶ್ವೇತಭವನದ ರಹಸ್ಯ ದಾಖಲೆಗಳನ್ನು ಅಧಿಕಾರ ಮುಗಿದ ನಂತರ ತಮ್ಮ ಖಾಸಗಿ ನಿವಾಸಕ್ಕೆ ಕೊಂಡೊಯ್ದಿದ್ದರು ಎಂಬ ಆರೋಪಗಳಡಿ ಟ್ರಂಪ್‌ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ವಕೀಲ ಜಾಕ್‌ ಸ್ಮಿತ್‌ ವಾದಿಸಿದ್ದರು.

‘ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರ ಸ್ವೀಕರಿಸಿದ ನಂತರ ಎರಡೇ ಕ್ಷಣಗಳಲ್ಲಿ ಜಾಕ್‌ ಸ್ಮಿತ್‌ ಅವರನ್ನು ಹುದ್ದೆಯಿಂದ ಕಿತ್ತೊಗೆಯುವೆ’ ಎಂದು ಅಕ್ಟೋಬರ್‌ 24ರಂದು ನೀಡಿದ್ದ ಸಂದರ್ಶನವೊಂದರಲ್ಲಿ ಟ್ರಂಪ್‌ ಗುಡುಗಿದ್ದರು.

‘ಅಮೆರಿಕದ ಅಧ್ಯಕ್ಷರಾದ ನಂತರ, ಸ್ಮಿತ್‌ ಅವರನ್ನು ಆ ಹುದ್ದೆಯಿಂದ ಕೆಳಗಿಳಿಸುವ ಅಧಿಕಾರ ಟ್ರಂಪ್ ಅವರಿಗೆ ಇದೆ. ಅಲ್ಲದೇ, ತಮ್ಮ ವಿರುದ್ಧದ ಫೆಡರಲ್‌ ಪ್ರಕರಣಗಳನ್ನು ಕೂಡ ರದ್ದು ಮಾಡುವ ಅಧಿಕಾರ ಹೊಂದಿದ್ದಾರೆ’ ಎಂದು ಕಾನೂನು ಸಲಹೆಗಾರ ಮೈಕ್‌ ಡೇವಿಸ್‌ ಹೇಳುತ್ತಾರೆ.

ತಮ್ಮ ವಿರುದ್ದದ ಹಷ್‌ ಮನಿ ಪ್ರಕರಣ ಹಾಗೂ ಚುನಾವಣಾ ಫಲಿತಾಂಶ ತಿರುಚಲು ಯತ್ನಿಸಿದ ಆರೋಪದ ಪ್ರಕರಣ ಕುರಿತು ಅವರು ಇಂತಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ, ಈ ಎರಡು ಪ್ರಕರಣಗಳಲ್ಲಿ, ಅಧ್ಯಕ್ಷರಾಗಿರುವವರೆಗೆ ಟ್ರಂಪ್‌ ಅವರು ಕಾನೂನು ಕ್ರಮ ಎದುರಿಸಬೇಕಾದ ಪ್ರಸಂಗ ಬರುವುದಿಲ್ಲ ಎಂದೂ ಡೇವಿಸ್‌ ಹೇಳಿದರು.

2ನೇ ಅವಧಿ: ಯೋಜನೆಗಳೇನು?
ವಾಷಿಂಗ್ಟನ್ (ಎಪಿ): ಅಮೆರಿಕದ ಅಧ್ಯಕ್ಷರಾಗಿ ಚುನಾಯಿತ ರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಎರಡನೆಯ ಅವಧಿಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಭರವಸೆಗಳನ್ನು ನೀಡಿದ್ದಾರೆ. ಬದಲಾವಣೆಗಳು ಏನು ಎಂಬ ಬಗ್ಗೆ ನಿರ್ದಿಷ್ಟವಾದ ವಿವರಣೆಯನ್ನು ಅವರು ನೀಡಿಲ್ಲದಿದ್ದರೂ, ಕಳೆದ ಒಂದು ವರ್ಷದಲ್ಲಿ ಅವರು ಮಾಡಿರುವ ಘೋಷಣೆಗಳು ಹಾಗೂ ಬರೆದಿರುವ ವಿಚಾರಗಳು ಹಲವು ಕಾರ್ಯಸೂಚಿಗಳ ಬಗ್ಗೆ ಮಾಹಿತಿ ನೀಡುತ್ತವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ವಹಿಸುವ ಪಾತ್ರದಲ್ಲಿ ಬದಲಾವಣೆ ಆಗುವ ಸಾಧ್ಯತೆಯನ್ನೂ ಅವರು ಸೂಚಿಸಿದ್ದಾರೆ. ಟ್ರಂಪ್ ಅವರು ಪ್ರಸ್ತಾವಿಸಿರುವ ಕೆಲವು ಮಹತ್ವದ ವಿಷಯಗಳು ಹೀಗಿವೆ: ವಲಸೆ: ವಲಸೆಯ ವಿಚಾರವಾಗಿ ಟ್ರಂಪ್‌ ಅವರು ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸೂಚನೆಗಳನ್ನು ನೀಡಿದ್ದಾರೆ. ಅಕ್ರಮ ವಲಸೆ ವಿರುದ್ಧ ಕಾರ್ಯಾಚರಣೆ ಹಾಗೂ ವಲಸೆಯ ಮೇಲೆ ನಿರ್ಬಂಧಗಳನ್ನು ವಿಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸುವವರಿಗೆ ಅಲ್ಲಿನ ಪೌರತ್ವ ಖಾತರಿಯಾಗಿ ಸಿಗುತ್ತದೆ ಎಂಬ ನಿಯಮವನ್ನು ಬದಲಾಯಿಸುವ, ಮುಸ್ಲಿಂ ಬಾಹುಳ್ಯದ ಕೆಲವು ದೇಶಗಳಿಂದ ಬರುವವರ ಸಂಖ್ಯೆಯನ್ನು ಸೀಮಿತಗೊಳಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಆದಾಯ ತೆರಿಗೆ: ಟ್ರಂಪ್ ಅವರು ಪ್ರತಿಪಾದಿಸುವ ತೆರಿಗೆ ನೀತಿಗಳು ಬೃಹತ್ ಉದ್ಯಮಗಳು ಹಾಗೂ ಅಮೆರಿಕದ ಶ್ರೀಮಂತರ ಪರವಾಗಿವೆ. ಅಮೆರಿಕದ ಶ್ರೀಮಂತರ ಮೇಲಿನ ಆದಾಯ ತೆರಿಗೆ ಪ್ರಮಾಣವನ್ನು ಹೆಚ್ಚಿಸಲು ಅಧ್ಯಕ್ಷ ಜೋ ಬೈಡನ್ ಅವರು ತೆಗೆದುಕೊಂಡ ತೀರ್ಮಾನವನ್ನು ಹಿಂಪಡೆಯುವ ಭರವಸೆಯನ್ನು ಟ್ರಂಪ್ ಅವರು ನೀಡಿದ್ದಾರೆ. ಅಲ್ಲದೆ, ಸಾಮಾಜಿಕ ಭದ್ರತಾ ಆದಾಯ ಮತ್ತು ನಿಗದಿತ ಅವಧಿಗಿಂತ ಹೆಚ್ಚು ಅವಧಿಗೆ ಕೆಲಸ ಮಾಡಿದ್ದಕ್ಕೆ ಸಿಗುವ ಹೆಚ್ಚುವರಿ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿರಿಸುವ ಪ್ರಸ್ತಾವವನ್ನೂ ಅವರು ಮಾಡಿದ್ದಾರೆ. ವ್ಯಾಪಾರ, ತೆರಿಗೆ: ವಿದೇಶಗಳಿಂದ ಅಮೆರಿಕಕ್ಕೆ ಆಮದಾಗುವ ಉತ್ಪನ್ನಗಳ ಮೇಲೆ ಶೇ 10ರಿಂದ ಶೇ 20ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವನ್ನು ಟ್ರಂಪ್ ಮಾಡಿದ್ದಾರೆ. ಕೆಲವು ಭಾಷಣಗಳಲ್ಲಿ ಅವರು ತೆರಿಗೆ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆಯೂ ಮಾತನಾಡಿದ್ದಾರೆ. ಸಾಮಾಜಿಕ ಭದ್ರತೆ, ಆರೋಗ್ಯಕ್ಕೆ ನೆರವು: ಸಾಮಾಜಿಕ ಭದ್ರತೆ ಹಾಗೂ ಮೆಡಿಕೇರ್ (ಹಿರಿಯ ನಾಗರಿಕರಿಗೆ ಆರೋಗ್ಯ ವಿಮಾ ಸೌಲಭ್ಯ) ಯೋಜನೆಗಳನ್ನು ತಾವು ಉಳಿಸಿಕೊಳ್ಳುವುದಾಗಿ ಟ್ರಂಪ್ ಅವರು ಹೇಳಿದ್ದಾರೆ. ಆದರೆ, ಟಿಪ್ಸ್‌ಗಳಿಗೆ ಮತ್ತು ಹೆಚ್ಚುವರಿ ದುಡಿಮೆಗೆ ಸಿಗುವ ಹೆಚ್ಚುವರಿ ಆದಾಯಕ್ಕೆ ತೆರಿಗೆ ವಿಧಿಸುವುದಿಲ್ಲ ಎಂಬ ಭರವಸೆಯು, ಸಾಮಾಜಿಕ ಭದ್ರತಾ ಯೋಜನೆ ಹಾಗೂ ಮೆಡಿಕೇರ್ ಯೋಜನೆ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಪ್ರಶ್ನೆಗಳು ಇವೆ. ಹವಾಮಾನ ಮತ್ತು ಇಂಧನ: ವಿದ್ಯುತ್ ಚಾಲಿತ ವಾಹನಗಳನ್ನು ತಾವು ವಿರೋಧಿಸುವುದಿಲ್ಲ ಎಂದು ಹೇಳಿರುವ ಟ್ರಂಪ್, ಬೈಡನ್ ಅವರ ಅಧಿಕಾರ ಅವಧಿಯಲ್ಲಿ ಇ.ವಿ. ಮಾರುಕಟ್ಟೆ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಾರಿಗೆ ತಂದ ಎಲ್ಲ ಕ್ರಮಗಳನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಹವಾಮಾನ ಬದಲಾವಣೆಯು ‘ಸುಳ್ಳು ಬೆದರಿಕೆ’ ಎಂದು ಟ್ರಂಪ್ ಯಾವಾಗಲೂ ಹೇಳುತ್ತಾರೆ. ವಿಶ್ವದಲ್ಲಿ ಅಮೆರಿಕದ ಪಾತ್ರ: ದೇಶದ ಮಿಲಿಟರಿಯನ್ನು ವಿಸ್ತರಿಸಲಾಗುವುದು, ರಕ್ಷಣೆಗೆ ಮಾಡುವ ವೆಚ್ಚಗಳನ್ನು ಹಾಗೇ ಉಳಿಸಿಕೊಳ್ಳಲಾಗುವುದು ಮತ್ತು ಹೊಸದಾದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ರಷ್ಯಾ–ಉಕ್ರೇನ್, ಇಸ್ರೇಲ್–ಹಮಾಸ್ ಯುದ್ಧಗಳನ್ನು ನಿಲ್ಲಿಸಲು ತಮ್ಮಿಂದ ಆಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ನ್ಯಾಟೊ ಬಗ್ಗೆ ಅವರು ಬಹಳ ಟೀಕೆಗಳನ್ನು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.