ವಾಷಿಂಗ್ಟನ್:ಹತ್ಯೆಯಾದ ಪತ್ರಕರ್ತ ಜಮಲ್ ಖಶೋಗ್ಗಿ ಅವರ ಮೃತದೇಹ ಎಲ್ಲಿದೆ ಎಂಬುದನ್ನು ತಕ್ಷಣವೇ ಬಹಿರಂಗಪಡಿಸಬೇಕು ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಅತ್ಯಂತ ಬೇಜವಾಬ್ದಾರಿಯಾಗಿ ವರ್ತಿಸಿದ ಸೌದಿ ರಾಜಕುಟುಂಬವನ್ನು ಕಟುವಾಗಿ ಟೀಕಿಸಿದ್ದಾರೆ.
‘ಭಾನುವಾರದ ವೇಳೆ ಸೌದಿ ಮುಖ್ಯ ಅಭಿಯೋಜಕರು ಟರ್ಕಿಗೆ ಬಂದಿಳಿಯಲಿದ್ದು, ತನಿಖೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಖಶೋಗ್ಗಿ ಹತ್ಯೆಪೂರ್ವ ನಿಯೋಜಿತ ಕೃತ್ಯ ಎಂದು ಸೌದಿ ಅರೇಬಿಯಾ ಕೂಡ ಒಪ್ಪಿಕೊಂಡಿದೆ’ ಎಂದು ಅವರು ತಿಳಿಸಿದರು.
ಮರಳಿ ಅಮೆರಿಕಕ್ಕೆ: ಖಸೋಗ್ಗಿ ಮಗನ ಮೇಲೆ ಹೇರಲಾಗಿದ್ದ ಪ್ರಯಾಣ ನಿರ್ಬಂಧವನ್ನು ಸೌದಿ ಸರ್ಕಾರ ಹಿಂಪಡೆದ ಬೆನ್ನಲ್ಲೇ ಅವರು ಅಮೆರಿಕಕ್ಕೆ ತೆರಳಿದ್ದಾರೆ.
ಜಮಾಲ್ ಪುತ್ರ ಸಲಾ ಖಶೋಗ್ಗಿ ಅಮೆರಿಕ ಹಿಂತಿರುಗಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಮೆರಿಕ ಸರ್ಕಾರದ ವಕ್ತಾರ ರಾಬರ್ಟ್ ಪಲ್ಲಾಡಿನೊ ಸ್ವಾಗತಿಸಿದ್ದಾರೆ.
ಪ್ರಕರಣವೇನು ?
ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರರಾಗಿದ್ದ ಖಶೋಗ್ಗಿ ಅವರು ಅಕ್ಟೋಬರ್ 2ರಂದು ಟರ್ಕಿಯಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್ ಕಚೇರಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು.
ಖಶೋಗ್ಗಿ ಅವರು ಕಾನ್ಸುಲೇಟ್ ಕಚೇರಿಯ ಹಿಂಬಾಗಿಲಿನ ಮೂಲಕ ಮರಳಿದ್ದರು ಎಂದು ಸೌದಿ ಅರೇಬಿಯಾ ಸರ್ಕಾರ ಮೊದಲಿಗೆ ಹೇಳಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದಾಗ, ಕಾನ್ಸುಲೇಟ್ ಕಚೇರಿಯಲ್ಲಿ ಖಶೋಗ್ಗಿ ಹತ್ಯೆ ನಡೆದಿದೆ ಎಂದು ಸೌದಿ ಹೇಳಿಕೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.