ಇಸ್ತಾನ್‌ಬುಲ್: ಅಮೆರಿಕ ನಡೆಸಿದ ದಾಳಿಯಲ್ಲಿ ಹತನಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಸ್ಥಾಪಕ ಅಬುಬಕರ್ ಅಲ್ ಬಗ್ದಾದಿಯ ಸಹೋದರಿಯನ್ನು ಸಿರಿಯಾದ ಉತ್ತರ ಭಾಗದಲ್ಲಿ ಟರ್ಕಿ ಪಡೆಗಳು ವಶಕ್ಕೆ ಪಡೆದಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಅಜಾಜ್ ನಗರದ ಸಮೀಪ ಟರ್ಕಿ ಪಡೆಗಳು ನಡೆಸಿದ ದಾಳಿ ಸಂದರ್ಭದಲ್ಲಿ ಬಗ್ದಾದಿ ಸಹೋದರಿ ರಷ್ಮಿಯಾ ಆವಾದ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಪತಿ, ಸೊಸೆ ಹಾಗೂ ಐವರು ಮೊಮ್ಮಕ್ಕಳ ಜತೆಗೆ ಆವಾದ್ ವಾಸಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಇತರೆ ಮೂವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ಐಎಸ್ ವಿಸ್ತರಣೆ ಕುರಿತು ಮಾಹಿತಿಯನ್ನು ಈಕೆಯಿಂದ ಪಡೆಯಲಾಗುತ್ತಿದೆ. ಈಕೆಯನ್ನು ವಶಕ್ಕೆ ಪಡೆದಿದ್ದರಿಂದ ಸಂಘಟನೆಯ ಇತರೆ ಸದಸ್ಯರನ್ನೂ ಬಂಧಿಸಲು ಸಹಾಯವಾಗಲಿದೆ’ ಎಂದು ತಿಳಿಸಿರುವ ಅವರು, ಬಂಧಿಸಿರುವ ಬಗ್ಗೆ ಅಧಿಕೃತವಾಗಿ ಹೇಳಿಲ್ಲ.
ಬಗ್ದಾದಿ ಸಹೋದರಿಯನ್ನು ಟರ್ಕಿ ಪಡೆಗಳು ಸೋಮವಾರ ರಾತ್ರಿ ಬಂಧಿಸಿವೆ ಎಂದು ಸಿರಿಯಾದ ಮಾನವ ಹಕ್ಕುಗಳ ಮೇಲ್ವಿಚಾರಣಾ ಸಂಘಟನೆ ಹೇಳಿದೆ.
‘ಆವಾದ್ ಜೊತೆಗೆ, ಈಕೆಯ ಪತಿ, ಸೊಸೆ ಹಾಗೂ ಐವರು ಮೊಮ್ಮಕ್ಕಳನ್ನು ಬಂಧಿಸಲಾಗಿದೆ. ಇದೇ ಸಂದರ್ಭದಲ್ಲಿ ಇತರೆ ನಾಲ್ವರನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಇವರು ಐಎಸ್ ಜತೆಗೆ ಹೊಂದಿರುವ ನಂಟಿನ ಬಗ್ಗೆ ಗೊತ್ತಾಗಿಲ್ಲ’ ಎಂದು ಸಂಘಟನೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.