ಇಸ್ತಾಂಬುಲ್, ಟರ್ಕಿ: ಖಶೋಗ್ಗಿ ಹತ್ಯೆ ನಡೆದ ದಿನ ಅವರ ಬಟ್ಟೆಯನ್ನು ಧರಿಸಿದ ವ್ಯಕ್ತಿಯೊಬ್ಬ ಕಾನ್ಸಲೇಟ್ ಕಚೇರಿಯಿಂದ ಹೊರಹೋಗುವ ಸಿಸಿಟಿವಿ ದೃಶ್ಯವನ್ನು ಸಿಎನ್‌ಎನ್ ವಾಹಿನಿ ಪ್ರಸಾರ ಮಾಡಿದೆ. ಹತ್ಯೆ ಮಾಡಲು ಸೌದಿಯಿಂದ ಇಸ್ತಾಂಬುಲ್‌ಗೆ ಬಂದಿದ್ದ 15 ಮಂದಿಯ ತಂಡದಲ್ಲಿ ಈತನೂ ಒಬ್ಬನಾಗಿರಬೇಕು ಎಂದು ಶಂಕಿಸಲಾಗಿದೆ.
ಖಶೋಗ್ಗಿ ಅವರ ಬಟ್ಟೆಯನ್ನು ಧರಿಸಿಕಚೇರಿಯ ಹಿಂದಿನ ದ್ವಾರದಿಂದ ಹೊರನಡೆದ ಆತ, ಟ್ಯಾಕ್ಸಿ ಹತ್ತಿ ಪ್ರಸಿದ್ಧ ಸುಲ್ತಾನ್ ಅಹ್ಮದ್ ಮಸೀದಿಗೆ ತೆರಳಿದ ಎಂದು ವಾಹಿನಿ ತಿಳಿಸಿದೆ.
ಹತ್ಯೆ ದಿನ ಯುವರಾಜನಿಗೆ ಕರೆ?
(ಅಂಕಾರ ವರದಿ): ಖಶೋಗ್ಗಿ ಹತ್ಯೆ ನಡೆದ ದಿನವೇ ಸೌದಿ ಯುವರಾಜ ಮಹಮ್ಮದ್ ಬಿನ್ ಸಲ್ಮಾನ್ ಕಚೇರಿಗೆ ಇಸ್ತಾಂಬುಲ್‌ನಲ್ಲಿರುವ ಸೌದಿ ಕಾನ್ಸಲೇಟ್ ಕಚೇರಿಯಿಂದ ನಾಲ್ಕು ಬಾರಿ ಕರೆ ಮಾಡಲಾಗಿತ್ತು ಎಂದು ಟರ್ಕಿ ಸರ್ಕಾರದ ಪರ ಪತ್ರಿಕೆಯೊಂದು ವರದಿ ಮಾಡಿದೆ. ಇದನ್ನು ವರದಿ ಮಾಡಿರುವ ಯೆನಿ ಸಫಾಕ್ ಅವರು, ಈ ಸುದ್ದಿಗೆ ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ.
ಸತ್ಯ ಸದ್ಯದಲ್ಲಿಯೇ ಬಹಿರಂಗ
ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಯ ನಗ್ನಸತ್ಯವನ್ನು ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯೀಪ್ ಎರ್ಡೋಗನ್ ಸೋಮವಾರ ಹೇಳಿದ್ದಾರೆ.
ಇಸ್ತಾಂಬುಲ್‌ನ ರಾಜತಾಂತ್ರಿಕ ಕಚೇರಿಯಲ್ಲಿ ಖಶೋಗ್ಗಿ ಹತ್ಯೆಯಾಗಿದ್ದಾರೆ ಎಂದು ಸೌದಿ ಸರ್ಕಾರದ ಅಧಿಕಾರಿಗಳು ಪ್ರಕಟಿಸಿದ ಬಳಿಕ ಟರ್ಕಿ ಅಧ್ಯಕ್ಷರು ಈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಎರ್ಡೋಗನ್ ಅವರು ಟರ್ಕಿ ಸಂಸತ್ತಿನಲ್ಲಿ ಮಂಗಳವಾರ ವಿಸ್ತೃತ ಹೇಳಿಕೆ ನೀಡಲಿದ್ದಾರೆ.
ಖಶೋಗ್ಗಿ ಹತ್ಯೆ ವ್ಯವಸ್ಥಿತ ಹಾಗೂ ಕ್ರೂರ ಕೃತ್ಯ ಎಂದು ಟರ್ಕಿಯ ಆಡಳಿತಾರೂಢ ಪಕ್ಷದ ವಕ್ತಾರ ಒಮರ್ ಸೆಲಿಕ್ ಆರೋಪಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎರ್ಡೋಗನ್ ಅವರು ಭಾನುವಾರ ದೂರವಾಣಿ ಸಂಭಾಷಣೆ ನಡೆಸಿದರು. ಖಶೋಗ್ಗಿ ಹತ್ಯೆ ಪ್ರಕರಣವು ಎಲ್ಲ ಆಯಾಮಗಳಲ್ಲಿ ಇತ್ಯರ್ಥವಾಗಬೇಕಿದೆ ಎಂಬ ಅಭಿಪ್ರಾಯಕ್ಕೆ ಉಭಯ ನಾಯಕರು ಬಂದರು.
ಹತ್ಯೆ ವಿಚಾರದಲ್ಲಿ ಸೌದಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪ ಮಾಡಿದ್ದರು.
ಸೌದಿ ವಿದೇಶಾಂಗ ಸಚಿವ ಅದೆಲ್ ಅಲ್ ಜುಬೇರ್ ಅವರು, ಹತ್ಯೆ ಕಾರ್ಯಾಚರಣೆಯ ಬಗ್ಗೆ ಸೌದಿ ಯುವರಾಜರಿಗೆ ಮಾಹಿತಿ ಇಲ್ಲ ಎಂದು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪತ್ರಕರ್ತನ ಮೃತದೇಹ ಎಲ್ಲಿದೆ ಎಂಬ ಮಾಹಿತಿಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.